BELAGAVI

ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಗೆ ಸಿಐಡಿ ಶಾಕ್; ಬೆಳಗಾವಿಗೆ ಆಗಮಿಸಿದ ವಿಶೇಷ ತನಿಖಾ ತಂಡ

Share

ಬೆಳಗಾವಿ ನಗರದ ಭಾಗ್ಯನಗರದಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಠೇವಣಿ ಹಣ ಹೂಡಿಕೆ ವಂಚನೆ ಆರೋಪ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳ ವಿಶೇಷ ತಂಡ ಬುಧವಾರ ಬೆಳಗಾವಿಗೆ ಆಗಮಿಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ನಗರದ ಟಿಳಕವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಿಐಡಿ ಅಧಿಕಾರಿಗಳು, ಇದುವರೆಗೆ ಪೊಲೀಸರು ಸಂಗ್ರಹಿಸಿದ್ದ ಪ್ರಕರಣ ಸಂಬಂಧಿತ ದಾಖಲೆಗಳು, ಹೂಡಿಕೆದಾರರ ಮಾಹಿತಿ, ಹಣಕಾಸು ವ್ಯವಹಾರಗಳ ದಾಖಲೆಗಳು ಹಾಗೂ ದೂರು ಅರ್ಜಿಗಳ ಪ್ರತಿಗಳನ್ನು ಪರಿಶೀಲಿಸಿ ತಮ್ಮ ವಶಕ್ಕೆ ಪಡೆದರು. ಈ ವೇಳೆ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸಿಐಡಿ ತಂಡ ಸುದೀರ್ಘ ಚರ್ಚೆ ನಡೆಸಿದೆಯೆಂದು ತಿಳಿದುಬಂದಿದೆ.

ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. ಸಂಸ್ಥೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ಬಳಿಕ ಹಣ ಮರುಪಾವತಿಯಲ್ಲಿ ವಿಫಲವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಹಲವಾರು ಹೂಡಿಕೆದಾರರು ತಮ್ಮ ಹಣ ವಾಪಸ್ ಸಿಗದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ದೂರು ನೀಡಿರುವ ಹಿನ್ನೆಲೆ ಪ್ರಕರಣಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ.

ಪ್ರಕರಣ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮಾಹಿತಿಯ ಆಧಾರದ ಮೇಲೆ ಸಿಐಡಿ ತನಿಖೆ ಆರಂಭವಾಗಿದ್ದು, ಹಣದ ಹಾದಿ, ಸಂಸ್ಥೆಯ ವ್ಯವಹಾರಗಳು ಹಾಗೂ ಸಂಬಂಧಪಟ್ಟವರ ಪಾತ್ರದ ಕುರಿತು ಆಳವಾದ ಪರಿಶೀಲನೆ ನಡೆಯುತ್ತಿದೆ. ಅಗತ್ಯವಿದ್ದಲ್ಲಿ ಸಂಸ್ಥೆಯ ನಿರ್ದೇಶಕರು ಹಾಗೂ ಸಂಬಂಧಪಟ್ಟವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಬೆಳಕಿಗೆ ಬಂದ ನಂತರ ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದ್ದು, ತಮ್ಮ ಹಣ ವಾಪಸ್ ಸಿಗಬೇಕೆಂದು ಹಲವರು ಆಗ್ರಹ ವ್ಯಕ್ತಪಡಿಸಿದ್ದಾರೆ. ಸದ್ಯ ಸಿಐಡಿ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

Tags:

error: Content is protected !!