ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲವು ಗ್ರಾಮಗಳಿಗೆ ಕಳೆದ ಎರಡು ದಶಕಗಳಿಂದ ಸಮರ್ಪಕ ಬಸ್ ಸೌಕರ್ಯವಿಲ್ಲದೆ ಜನರು ಪರದಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ಹಾಗೂ ರೈತರ ಹಿತದೃಷ್ಟಿಯಿಂದ ತಕ್ಷಣವೇ ಬಸ್ ಸೇವೆ ಆರಂಭಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಖಾನಾಪುರ ತಾಲೂಕಿನ ಮುಡೇವಾಡಿ, ಹತ್ತರಗುಂಜಿ, ದುಕ್ಕರವಾಡಿ, ಸಾತ್ನಾಳಿ, ಪಿಂಪಳಿ, ಮಾಂಜರಪಾಯಿ, ಮಾಚಾಳಿ ಹಾಗೂ ಗಾರ್ಲಿ ಗ್ರಾಮಗಳಿಗೆ ಕಳೆದ 20 ವರ್ಷಗಳಿಂದ ಸರ್ಕಾರಿ ಬಸ್ ಸೌಲಭ್ಯ ಸಿಕ್ಕಿಲ್ಲ. ಇದರಿಂದಾಗಿ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರು ನಿತ್ಯ ನಗರ ಪ್ರದೇಶಕ್ಕೆ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಸಂಯೋಜಕ) ಬೆಳಗಾವಿ ಜಿಲ್ಲಾ ಸಮಿತಿಯು ಇಂದು ಖಾನಾಪುರ NWKSRTC ಬಸ್ ಡಿಪೋ ವ್ಯವಸ್ಥಾಪಕರಿಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿ, ತಕ್ಷಣ ಬಸ್ ಬಿಡುವಂತೆ ಒತ್ತಾಯಿಸಿದೆ.

ಮುಂಜಾನೆ ಶಾಲಾ ಅವಧಿಗೆ ಹಾಗೂ ಸಾಯಂಕಾಲ ಶಾಲೆ ಮುಕ್ತಾಯವಾಗುವ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜಶೇಖರ ಶಂಕರ ಹಿಂಡಲಗಿ, ಪ್ರಮುಖರಾದ ರವಿ ಮಾದರ, ಬಸವರಾಜ ಮಾದರ, ಮಂಜುನಾಥ್ ಮಾದರ, ಸಂಜಯ ದೇಸಾಯಿ, ಸುಜಾತಾ ದೇಸಾಯಿ, ಯಲ್ಲಪ್ಪ ಖೋತ, ಪುಂಡಲೀಕ ದಳವಿ, ಮನೋಹರ ಇಂದೋಲ್ಕರ್ ಸೇರಿದಂತೆ ನೂರಾರು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು.
