ಖಾನಾಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯು ತೀವ್ರ ಹಂಗಾಮಾ ಮತ್ತು ಅಧಿಕಾರಿಗಳ ತರಾಟೆಗೆ ಸಾಕ್ಷಿಯಾಗಿದೆ. ಪಡಿತರ ವಿತರಣೆಯಲ್ಲಿನ ದಗಾಬಾಜಿ ಹಾಗೂ ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಿರುವ ಇಲಾಖೆಯ ನಡೆಗೆ ಪ್ರಾಧಿಕಾರದ ಸದಸ್ಯೆ ದೀಪಾ ಪಾಟೀಲ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡರು.


ಖಾನಾಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯು ಇಂದು ಸಂಪೂರ್ಣ ಗರಂ ಆಗಿತ್ತು. ಸಭೆಯಲ್ಲಿ ಬೀಡಿ ಭಾಗದ ಪಡಿತರ ವಿತರಣೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಪ್ರಸ್ತಾಪಿಸಿದ ಪ್ರಾಧಿಕಾರದ ಸದಸ್ಯೆ ದೀಪಾ ಪಾಟೀಲ್ ಅವರು, ಪ್ರತಿ 50 ಕೆಜಿ ಅಕ್ಕಿ ವಿತರಣೆಯಲ್ಲಿ 3 ರಿಂದ 4 ಕೆಜಿ ಕಡಿಮೆ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಸಪ್ಲೈ ಹೀಗೆ ಬರುತ್ತಿದೆ ಎಂದು ಹಾರಿಕೆ ಉತ್ತರ ನೀಡುವ ಅಧಿಕಾರಿಗಳ ನಡೆಯನ್ನು ಪ್ರಶ್ನಿಸಿದ ಅವರು, ‘ಕೇಳಿದರೆ ನಿಮಗೆ ಏನು ಬೇಕು? ಎಂದು ಕೇಳುತ್ತಾರೆ, ಇದರ ಅರ್ಥ ಏನು?’ ಎಂದು ಆಹಾರ ಇಲಾಖೆಯ ಯಮಕನಮರಡಿ ಅಧಿಕಾರಿಗಳ ವಿರುದ್ಧ ಪ್ರಶ್ನೆಗಳ ಸುರಿಮಳೆ ಸುರಿಸಿದರು. ಆದರೆ ಇದಕ್ಕೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಾಗದೆ ಜಾರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೇ ವೇಳೆ, ಬಡವರ ಬಿಪಿಎಲ್ ಕಾರ್ಡ್‌ಗಳು ಶ್ರೀಮಂತರ ಪಾಲಾಗುತ್ತಿರುವ ಬಗ್ಗೆಯೂ ದೀಪಾ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ಚಕ್ರದ ವಾಹನ ಹಾಗೂ ಸ್ವಂತ ಬಿಲ್ಡಿಂಗ್ ಹೊಂದಿರುವ ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದ್ದು, ನಿಜವಾದ ಬಡ ಜನರಿಗೆ ಮೋಸ ಮಾಡಲಾಗಿದೆ ಎಂದು ದೂರಿದರು. ಈ ತಿಂಗಳು ಎರಡು ಬಾರಿ ಥಂಬ್ ತಡೆ ಹಿಡಿದಿರುವುದಕ್ಕೆ ಸೂಕ್ತ ಮಾಹಿತಿ ಇಲ್ಲದಿರುವುದನ್ನು ಪ್ರಶ್ನಿಸಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಮೇಶ್ ಮೇತ್ರಿ ಅವರನ್ನು ಖಡಕ್ ಆಗಿ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಸದಸ್ಯರಾದ ಇಸಾಕ್ ಖಾನ್ ಪಠಾಣ್, ಬಾಬು ಹತ್ತರವಾಡ ಸೇರಿದಂತೆ ಇತರ ಸದಸ್ಯರು ತಮ್ಮ ಭಾಗದ ಸಮಸ್ಯೆಗಳನ್ನು ಮಂಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದ ಈ ಸಭೆಯು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿತ್ತು.
