ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಮಳೆಯ ಆರ್ಭಟಕ್ಕೆ ಬಾದಾಮಿ ತಾಲೂಕಿನ ಗ್ರಾಮವೊಂದರಲ್ಲಿ ವಾಸದ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ರೈತರ ಜಮೀನುಗಳು ಕೆರೆಯಂತಾಗಿ ಮಾರ್ಪಟ್ಟಿವೆ.


ಬಾಗಲಕೋಟೆ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಬಿರುಗಾಳಿ ಸಹಿತ ಸುರಿದ ಭೀಕರ ಮಳೆಗೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಸುಮಾರು ಎರಡು ಗಂಟೆಗಳ ಕಾಲ ಸತತವಾಗಿ ಸುರಿದ ಮಳೆಗೆ ಗ್ರಾಮದ ನಿವಾಸಿ ಈರಪ್ಪ ಲದ್ದಿ ಎಂಬುವವರಿಗೆ ಸೇರಿದ ಮಣ್ಣು ಮತ್ತು ಕಟ್ಟಿಗೆಯ ಮೇಲ್ಛಾವಣಿ ಹೊಂದಿದ್ದ ಹಳೆಯ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಗೋಡೆಗಳು ಮಳೆಗೆ ಸಂಪೂರ್ಣವಾಗಿ ನೆನೆದು ಹೋಗಿದ್ದರಿಂದ ಮಧ್ಯರಾತ್ರಿ ಈ ಅವಘಡ ಸಂಭವಿಸಿದೆ. ಮನೆಯಲ್ಲಿದ್ದ ಐದು ಜನರ ಕುಟುಂಬವು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಕೋಣೆಯು ಶೀಥಲಾವಸ್ಥೆಯಲ್ಲಿದ್ದ ಕಾರಣ, ಕುಟುಂಬದ ಸದಸ್ಯರು ಮುನ್ನೆಚ್ಚರಿಕೆಯಾಗಿ ಬೇರೆ ಕಡೆ ಮಲಗಿದ್ದರಿಂದ ದೊಡ್ಡ ಕಂಟಕವೊಂದು ದೂರಾದಂತಾಗಿದೆ. ಪ್ರಸ್ತುತ ವಾಸಿಸಲು ಸೂಕ್ತ ಆಶ್ರಯವಿಲ್ಲದೆ ಕಂಗಾಲಾಗಿರುವ ಈ ಕುಟುಂಬವು ತಮಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ತೀವ್ರವಾಗಿ ಆಗ್ರಹಿಸಿದೆ.

ಇನ್ನು ಇದೇ ಮಳೆಯು ತಾಲೂಕಿನ ಅನ್ನದಾತರಿಗೂ ದೊಡ್ಡ ಹೊಡೆತ ನೀಡಿದೆ. ಮುಂಗಾರು ಹಂಗಾಮಿನ ಬಿತ್ತನೆಗಾಗಿ ಭೂಮಿಯನ್ನು ಹಸನುಗೊಳಿಸಿ ಸಿದ್ಧಪಡಿಸಿಕೊಂಡಿದ್ದ ರೈತರ ನೂರಾರು ಎಕರೆ ಜಮೀನುಗಳು ಧಾರಾಕಾರ ಮಳೆಗೆ ಕೆರೆಯಂತಾಗಿ ಮಾರ್ಪಟ್ಟಿವೆ. ಜಮೀನುಗಳಲ್ಲಿ ಭಾರಿ ಪ್ರಮಾಣದ ನೀರು ಬಂದು ಆವರಿಸಿಕೊಂಡಿದ್ದರಿಂದ ರೈತರು ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಮಣ್ಣು ಕೊಚ್ಚಿಹೋಗಿ ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಕೃಷಿಯನ್ನೇ ನಂಬಿಕೊಂಡಿದ್ದ ನೂರಾರು ಕುಟುಂಬಗಳು ಈಗ ಆತಂಕಕ್ಕೆ ಒಳಗಾಗಿವೆ. ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಿ, ನೊಂದ ರೈತರಿಗೆ ಮತ್ತು ಸಂತ್ರಸ್ತ ಕುಟುಂಬಕ್ಕೆ ನೆರವಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
