Chikkodi

ಸಂಭಾವ್ಯ ಪ್ರವಾಹ ಎದುರಿಸಲು ಚಿಕ್ಕೋಡಿ ತಾಲೂಕಾಡಳಿತ ಸನ್ನದ್ಧ; ಅಧಿಕಾರಿಗಳ ಮಹತ್ವದ ಸಭೆ

Share

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳಲ್ಲಿ ಸಂಭಾವ್ಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಎಸಿ ಸುಭಾಷ ಸಂಪಗಾವಿ ‌ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ವಿಪತ್ತು ನಿರ್ವಹಣಾ ತಂಡದ ಮಹತ್ವದ ಸಭೆಯನ್ನು ನಡೆಸಲಾಯಿತು.

ಚಿಕ್ಕೋಡಿ ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಈ ಸಭೆಯಲ್ಲಿ, ಪ್ರವಾಹದ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ಎಂಬ ಮೂರು ಪ್ರಮುಖ ನದಿಗಳು ಹರಿಯುತ್ತಿದ್ದು, ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಇವು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ಜೀವಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ವಿಪತ್ತು ನಿರ್ವಹಣಾ ಸಮಿತಿಯು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.

ಸಂಭಾವ್ಯ ಪ್ರವಾಹವನ್ನು ಎದುರಿಸಲು ತಾಲೂಕಾಡಳಿತವು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳೊಂದಿಗೆ ಸನ್ನದ್ಧವಾಗಿದೆ ಎಂದು ಉಪ ವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಅವರು ಮಾಹಿತಿ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ತಕ್ಷಣದ ಸ್ಪಂದನೆಗಾಗಿ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಒಟ್ಟು 14 ಬೋಟ್‌ಗಳನ್ನು ಸಿದ್ಧವಾಗಿಡಲಾಗಿದೆ. ತುರ್ತು ರಕ್ಷಣೆಗಾಗಿ 30 ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನುನಿಯೋಜಿಸಲಾಗಿದೆ.ಪ್ರವಾಹ ಭೀತಿ ಎದುರಾದರೆ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತಾಲೂಕಿನಾದ್ಯಂತ ಒಟ್ಟು 38 ಪರಿಹಾರ ಕೇಂದ್ರಗಳನ್ನು (ಗಂಜಿ ಕೇಂದ್ರಗಳು) ಈಗಾಗಲೇ ಗುರುತಿಸಲಾಗಿದೆ ಎಂದರು.

ಮಳೆಗಾಲದ ಅವಧಿಯಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ಸ್ಪಂದಿಸುವಂತೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುವಂತೆ ಸಭೆಯಲ್ಲಿ ಸೂಚಿಸಲಾಯಿತು.

Tags:

error: Content is protected !!