BELAGAVI

ಹಸೆಮಣೆ ಏರಿದ ಕೇವಲ ಒಂದೇ ತಿಂಗಳಿಗೆ ನವವಿವಾಹಿತೆ ದುರಂತ ಅಂತ್ಯ

Share

ಬೆಳಗಾವಿ ನಗರದ ಮಹಾದ್ವಾರ ರಸ್ತೆಯ ಅಷ್ಟೇಕರ ಗಲ್ಲಿಯಲ್ಲಿ ನವವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ರಕ್ಷಿತಾ ಪೂಜಾರಿ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಒಂದು ತಿಂಗಳ ಹಿಂದಷ್ಟೇ ರಕ್ಷಿತಾಳ ವಿವಾಹ ಮಂಜುನಾಥ ಕೃಷ್ಣಾ ಪೂಜಾರಿ ಅವರೊಂದಿಗೆ ನಡೆದಿತ್ತು. ರಕ್ಷಿತಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವರ್ಕ್ ಫ್ರಾಮ್ ಹೋಮ್ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದಳು.
ಜೂ. 9ರಂದು ಬೆಳಿಗ್ಗೆ ತಾಯಿಗೆ ಕರೆ ಮಾಡಿದ ರಕ್ಷಿತಾ, ಮನೆಗೆ ಬರದೇ ಗಂಡನ ಮನೆಯಲ್ಲಿ ಉಳಿಯುವುದಾಗಿ ತಿಳಿಸಿದ್ದಳು. ನಂತರ ಸಂಜೆವರೆಗೆ ಫೋನ್ ಸಂಪರ್ಕವಾಗದೇ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಮನೆಗೆ ತೆರಳಿದ್ದಾರೆ. ಮನೆ ಒಳಗಡೆಯಿಂದ ಲಾಕ್ ಆಗಿದ್ದರಿಂದ ಅನುಮಾನಗೊಂಡ ಕುಟುಂಬಸ್ಥರು ಕಿಟಕಿಯಿಂದ ನೋಡಿದಾಗ ರಕ್ಷಿತಾ ಫ್ಯಾನಿಗೆ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆರೆಯಿಸಿ ಪರಿಶೀಲನೆ ನಡೆಸಿದಾಗ ರಕ್ಷಿತಾ ಮೃತಪಟ್ಟಿರುವುದು ದೃಢಪಟ್ಟಿದೆ. ರಕ್ಷಿತಾ ಗಂಡನ ಮನೆಯಲ್ಲಿ ಚೆನ್ನಾಗಿಯೇ ಇದ್ದಳು. ಆದರೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!