Vijaypura

ಪೊಲೀಸ್ ಇಲಾಖೆಯ ವಿನೂತ‌ನ ಕಾರ್ಯಕ್ರಮ: ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವ ಪೊಲೀಸರು

Share

ಪೊಲೀಸ ಇಲಾಖೆಯು ರಾಜ್ಯಾದ್ಯಂತ ಹಿರಿಯ ನಾಗರೀಕರ ಮತ್ತು ಒಂಟಿ ಮಹಿಳೆಯರ ಸುರಕ್ಷತೆ ಕುರಿತಾಗಿ ʼಆಸರೆʼ ಅನ್ನುವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದು ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರೀಕರಿಗೆ ಮತ್ತು ಒಂಟಿ ಮಹಿಳೆಯರಿಗೆ ಸುರಕ್ಷೆ ಮತ್ತು ಅವರಲ್ಲಿ ಒಂಟಿ ಭಾವನೆಯನ್ನು ಹೋಗಲಾಡಿಸಿ, ವಿಶ್ವಾಸ ಮೂಡಿಸುವ ಉದ್ದೇಶದಿಂದ ಮಾಡಲಾಗಿದ್ದು, ಈ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..

ಹೌದು ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದ ಆಸರೆ ಯೋಜನೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ಜಿಲ್ಲೆಯ ಎಲ್ಲ 28 ಪೊಲೀಸ್ ಠಾಣೆಗಳ ವ್ಯಾಪ್ತಿಯ 329 ಬೀಟ್‌ಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೇ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮವು ಜಾರಿಯಲ್ಲಿದ್ದು, ಅದರ ಒಂದು ಭಾಗವಾಗಿ ಆಸರೆ ಕಾರ್ಯಕ್ರಮವನ್ನು ಅಳವಡಿಸಿಕೊಂಡು ಎಲ್ಲ 329 ಬೀಟ್‌ ಸಿಬ್ಬಂದಿ ಜನರು ತಮ್ಮ ತಮ್ಮ ಬೀಟ್‌ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರೀಕರ, ಒಂಟಿ ಮಹಿಳೆಯರನ್ನು ಗುರುತಿಸಿ, ಖುದ್ದಾಗಿ ಭೇಟಿಯಾಗಿ ಅವರು ಎದುರಿಸುತ್ತಿರುವ ತೊಂದರೆ, ಸಮಸ್ಯೆಗಳ ಬಗ್ಗೆ ಆಲಿಸಿ ಇದರ ಜೊತೆಗೆ ಪ್ರಸ್ತುತ ಸರ್ಕಾರದಿಂದ ಹಿರಿಯ ನಾಗರೀಕರು, ಒಂಟಿ ಮಹಿಳೆಯರಿಗೆ ಸರ್ಕಾರದಿಂದ ಜಾರಿಗೊಳಿಸಲಾದ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರಿಗೆ ಯೋಜನೆಯ ಸದುಪಯೋಗವನ್ನು ತಲುಪಿಸಿ, ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಕೈಗೊಂಡಿದ್ದಾರೆ…

ತಂದೆ ತಾಯಿಯರ ಮತ್ತು ಹಿರಿಯ ನಾಗರೀಕರ ಪಾಲನೆ, ಪೋಷಣೆ ಮಾಡುವದು. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ. ಹಿರಿಯ ನಾಗರೀಕರಿಗೆ ಬಸ್‌ ಪ್ರಯಾಣ ದರದಲ್ಲಿ ರಿಯಾಯಿತಿ. ಒಂಟಿ ಮಹಿಳೆಯರಿಗೆ ವಿಧವಾ ವೇತನ. ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸುವದು. ಮೃತ ರೈತರ ಪತ್ನಿಗೆ ವಿಧವಾ ವೇತನ. ಆಸಿಡ್‌ ದಾಳಿಗೊಳಗಾದ ಮಹಿಳೆಗೆ ಸಹಾಯ ಧನ ಯೋಜನೆ. ಹೀಗೆ ಹಲವು ಯೋಜನೆಗಳ ಸಹಾಯಕ್ಕಾಗಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಜಿಲ್ಲಾ ಪೊಲೀಸರು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು ವಿವಿಧ ಯೋಜನೆಗಳಡಿ 73 ಫಲಾನುಭವಿಗಳಿಗೆ ಇದರ ಸದುಪಯೋಗ ಆಗುವಂತೆ ಪೊಲೀಸರು ಮಾಡಿದ್ದಾರೆ…

ಆಸರೆ ಯೋಜನೆಯನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳು ಅದರಲ್ಲೂ ವಿಶೇಷವಾಗಿ ಬೀಟ್‌ ಸಿಬ್ಬಂದಿ ಜನರು ಆದ್ಯತೆಯನ್ನಾಗಿ ಪರಿಗಣಿಸಿ ತಮ್ಮ ಶ್ರಮ ವಹಿಸಿ ಯೋಜನೆಗಳನ್ನು ತಲುಪಿಸುವಲ್ಲಿ ಉತ್ತಮ ಕರ್ತವ್ಯ ತೋರುತ್ತಿರುವದು ನಿಜಕ್ಕೂ ಶ್ಲಾಘನೀಯವೇ ಸರಿ…

Tags:

error: Content is protected !!