ಬಾಲಕನ ಮೇಲೆ ಬೀದಿ ನಾಯಿ ದಾಳಿ: ವಿಜಯಪುರ ಸ್ತಬ್ಧ

ನಾಯಿ ಹಿಡಿಯಲು ಹೋದರೆ ಪ್ರಾಣಿ ಪ್ರಿಯರ ‘ಅವಾಜ್’

ಸಾರ್ವಜನಿಕರ ಆಕ್ರೋಶ; ಪಾಲಿಕೆಗೆ ದಿಕ್ಕುತೋಚದ ಸ್ಥಿತಿ
ಬೀದಿ ನಾಯಿಗಳ ಕಾಟಕ್ಕೆ ಬೇಕಿದೆ ಶಾಶ್ವತ ಪರಿಹಾರ
ಇತ್ತಿಚೆಗೆ ವಿಜಯಪುರ ನಗರದ ರಾಜಕುಮಾರ ಲೇಔಟ್‌ನಲ್ಲಿ, ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿ, ಸುಮಾರು 100 ಅಡಿಗಳಷ್ಟು ದೂರ ಎಳೆದೊಯ್ದಿತ್ತು. ಸಿಸಿಟಿವಿಯಲ್ಲಿ ಸೆರೆಯಾದ ಈ ಭೀಕರ ಘಟನೆಯಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ಸಾರ್ವಜನಿಕರು ಒತ್ತಾಯಿಸಿದರೆ, ನಾಯಿ ಹಿಡಿದಿದ್ದಕ್ಕೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮಹಾನಗರ ಪಾಲಿಕೆ ಇಕ್ಕಟ್ಟಿನಲ್ಲಿ ಸಿಲುಕಿದೆ. ಈ ಕುರಿತು ಇಲ್ಲಿದೆ ಒಂದು ವರದಿ….
ಹೌದು ವಿಜಯಪುರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರು ಭಯದಲ್ಲಿ ಓಡಾಡುವಂತಾಗಿದೆ. ನಾಯಿಗಳಿಗೆ ಕಡಿವಾಣ ಹಾಕಲು ಪಾಲಿಕೆ ಸಿಬ್ಬಂದಿ ಮುಂದಾದರೆ, ಪಾಲಿಕೆ ಸದಸ್ಯರಿಗೆ ಪ್ರಾಣಿ ಪ್ರಿಯರು ಕರೆ ಮಾಡಿ ಅವಾಜ್ ಹಾಕುವ ಪ್ರಕರಣ ಕೂಡಾ ಬೆಳಕಿಗೆ ಬಂದಿದೆ. ಇತ್ತಿಚೆಗೆ ಹಿಂದೆ ನಗರದ ರಾಜಕುಮಾರ ಲೆಔಟ್ನಲ್ಲಿ 3 ವರ್ಷದ ಬಾಲಕನಿಗೆ ಬೀದಿ ನಾಯಿ ಕಚ್ಚಿದ್ದಲ್ಲದೇ ಸುಮಾರು 200 ಮೀಟರ್ ನಷ್ಟು ಎಳೆದೊಯ್ದತ್ತು. ಕಾರಿನಲ್ಲಿದ್ದ ವ್ಯಕ್ತಿ ಇದನ್ನು ನೋಡಿ ಆ ಬೀದಿ ನಾಯಿಯನ್ನು ಓಡಿಸಿ ಮಗುವಿನ ರಕ್ಷಣೆ ಮಾಡಿದ್ದರು. ಘಟನೆಯ ದೃಶ್ಯ ಮನೆಯೊಂದರ ಹೊರಗಡೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ಬಡಾವಣೆಯ ಜನರು ಬೆಚ್ಚಿ ಬಿದ್ದಿದ್ದು, ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದರು.
ಇನ್ನೂ ವಿಜಯಪುರ ನಗರದಲ್ಲಿ ಕಳೆದೊಂದು ತಿಂಗಳಿನಿಂದ ಬೀದಿ ನಾಯಿಗಳು ಸ್ಥಳೀಯರ ನಿದ್ದೆಗೆಡಿಸಿವೆ. ರಸ್ತೆಯಲ್ಲಿ ಓಡಾಡುವ ಮಕ್ಕಳು, ವೃದ್ಧರು, ಮಹಿಳೆಯ ಮೇಲೆ ದಾಳಿ ಮಾಡುತ್ತಿವೆ. ಜನರು ಓಡಾಡಲು ಸಹ ಭಯಪಡುವಂತಾಗಿದೆ. ಹಾಗಾಗಿ ಪಾಲಿಕೆ ವತಿಯಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು. ಹಾಗೆ ಅವುಗಳಿಗೆ ವ್ಯಾಕ್ಸಿನೇಷನ್ ಮಾಡಬೇಕು ಎಂದು ಆಗ್ರಹ ಮಾಡಿದ್ದರು. ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಪಾಲಿಕೆ ಸಿಬ್ಬಂದಿ, ಬೀದಿ ನಾಯಿಗಳಿಗೆ ಹಿಡಿಯಲು ಮುಂದಾಗಿದ್ದರು. ಆದರೆ, ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ತಮಗೆ ಫೋನ್ ಮಾಡಿದ ಮಹಿಳೆಯೊಬ್ಬರು, ನಾಯಿಗಳಿಗೆ ಹಿಂಸೆ ನೀಡದಂತೆ ಅವಾಜ್ ಹಾಕಿದ್ದಾರೆ. ಈ ಆಡಿಯೋ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ. ನಾವು ನಾಯಿ ಹಿಡಿಯಲು ಹೋದರೆ ಸುಪ್ರೀಂಕೋರ್ಟ್ ಆರ್ಡರ್ ತಂದು ಪ್ರಾಣಿ ಪ್ರಿಯರು ನಮಗೆ ಅವಾಜ್ ಹಾಕುತ್ತಾರೆ. ನಾಯಿ ಹಿಡಿಯದಿದ್ದರೆ ಬಡಾವಣೆಯ ನಿವಾಸಿಗಳು ನಮ್ಮ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದರಿಂದ ನಾವು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ಸಾರ್ವಜನಿಕರು ಒತ್ತಾಯಿಸಿದರೆ, ನಾಯಿ ಹಿಡಿದಿದ್ದಕ್ಕೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸು ತ್ತಿದ್ದಾರೆ. ಇದರಿಂದ ಮಹಾನಗರ ಪಾಲಿಕೆ ಇಕ್ಕಟ್ಟಿನಲ್ಲಿ ಸಿಲುಕಿದೆ. ಅಧಿಕಾರಿಗಳು ಎನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದ್ದಾರೆ.
