BELAGAVI

ಬೆಳಗಾವಿ ಪೊಲೀಸರ ಬಿಗ್ ಆಪರೇಷನ್: ಅಂತರರಾಜ್ಯ ಮನೆಗಳ್ಳರ ಗ್ಯಾಂಗ್ ಕಿಂಗ್‌ಪಿನ್ ಅರೆಸ್ಟ್ – 45 ಲಕ್ಷದ ಚಿನ್ನ ಜಪ್ತಿ!

Share

ಬೆಳಗಾವಿಯ ಜನತೆಗೆ ನೆಮ್ಮದಿಯ ಸುದ್ದಿ. ಕಳೆದ ಕೆಲವು ದಿನಗಳಿಂದ ಮನೆಗಳಿಗೆ ಕನ್ನ ಹಾಕುತ್ತಿದ್ದ ಉತ್ತರ ಭಾರತದ ಖತರ್ನಾಕ್ ಗ್ಯಾಂಗ್ ಒಂದನ್ನು ಬೆಳಗಾವಿ ಪೊಲೀಸರು ಬೇಟೆಯಾಡಿದ್ದಾರೆಂದು ನಗರ ಪೊಲೀಸ ಆಯುಕ್ತರಾದ ಭೂಷಣ್ ಬೋರಸೆ ಅವರು ತಿಳಿಸಿದರು.

ಬೆಳಗಾವಿ ನಗರದ ಶಹಾಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದೆಹಲಿ ಹಾಗೂ ಉತ್ತರ ಪ್ರದೇಶ ಮೂಲದ ಅಂತರರಾಜ್ಯ ಮನೆಗಳ್ಳರ ಗ್ಯಾಂಗ್‌ನ ಕಿಂಗ್‌ಪಿನ್ ಮಿಂಟು ವಿಶ್ವಾಸ್ (52) ಎಂಬಾತನನ್ನು ಬಂಧಿಸಿದ್ದಾರೆ. ಕಳ್ಳತನ ನಡೆದ ಸ್ಥಳದಲ್ಲಿ ದೊರೆತ ಬೆರಳಚ್ಚು (Finger Print) ಮಾಹಿತಿಯೇ ಈ ಖತರ್ನಾಕ್ ಕಳ್ಳನ ಹೆಡೆಮುರಿ ಕಟ್ಟಲು ಪ್ರಮುಖ ಸುಳಿವು ನೀಡಿದೆ. ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರ ಸಹಯೋಗದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಆರೋಪಿಯಿಂದ ಸುಮಾರು 44 ಲಕ್ಷದ 86 ಸಾವಿರ ರೂಪಾಯಿ ಮೌಲ್ಯದ 294 ಗ್ರಾಂ ಗಟ್ಟಿ ಬಂಗಾರ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಬೈಕ್ ಅನ್ನು ಜಪ್ತಿ ಮಾಡಲಾಗಿದೆ.

ಈ ಗ್ಯಾಂಗ್ ಕೇವಲ ಕರ್ನಾಟಕ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೈಚಳಕ ತೋರಿಸುತ್ತಿತ್ತು. ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರ ನಿರ್ದೇಶನದಂತೆ ರಚಿಸಲಾಗಿದ್ದ ವಿಶೇಷ ತಂಡವು ಅತ್ಯಂತ ಚಾಣಾಕ್ಷತನದಿಂದ ಆರೋಪಿಯನ್ನು ಸೆರೆಹಿಡಿದಿದೆ. ಶಹಾಪುರ ಪೊಲೀಸರ ಈ ಸಾಹಸಮಯ ಕೆಲಸಕ್ಕೆ ಕಮಿಷನರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಬಂಧನದಿಂದ ಹಲವು ಹಳೆಯ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ.

Tags:

error: Content is protected !!