• ವಿನಯ ಕುಲಕರ್ಣಿ ಶಾಸಕ ಸ್ಥಾನ ಅನರ್ಹ
• ಧಾರವಾಡ ಗ್ರಾಮೀಣದಲ್ಲಿ ಉಪಚುನಾವಣೆ ಫೀವರ್
• ಕ್ಷೇತ್ರದಲ್ಲಿ ಅಮೃತ ದೇಸಾಯಿ ಮಿಂಚಿನ ಸಂಚಾರ
• ಸೋಶಿಯಲ್ ಮೀಡಿಯಾದಲ್ಲಿ ಕುಲಕರ್ಣಿ ಪರ ಅಭಿಯಾನ

ಇತ್ತೀಚೆಗೆ ಜನಪ್ರತಿನಿಧಿಗಳ ನ್ಯಾಯಾಲಯವು ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ ಕುಲಕರ್ಣಿ ಸೇರಿ 17 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಅಂತಿಮ ತೀರ್ಪಿನಲ್ಲಿ ಜೀವಾವಧಿ ಶಿಕ್ಷೆಯ ಆದೇಶ ಹೊರಬಂದ ಬೆನ್ನಲ್ಲೇ, ಕುಲಕರ್ಣಿ ಅವರ ಶಾಸಕ ಸ್ಥಾನವು ಅನರ್ಹಗೊಂಡಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಈಗ ರಾಜಕೀಯ ಚಟುವಟಿಕೆಗಳು ಸದ್ದಿಲ್ಲದೆ ಗರಿಗೆದರಿವೆ.

• ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಸ್ಥಾನ ಅನರ್ಹಗೊಂಡ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ.
• ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಬಿಜೆಪಿ ಮಾಜಿ ಶಾಸಕ ಅಮೃತ ದೇಸಾಯಿ.
• ಕ್ಷೇತ್ರವನ್ನು ಹಿಡಿದಿಟ್ಟುಕೊಳ್ಳಲು ಸೋಶಿಯಲ್ ಮೀಡಿಯಾ ಮೂಲಕ ಅಖಾಡಕ್ಕಿಳಿದ ಕುಲಕರ್ಣಿ ಬೆಂಬಲಿಗರು.
ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿದ್ದ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಅವರ ಶಾಸಕ ಸ್ಥಾನವು ಅನರ್ಹಗೊಂಡಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರವು ಸದ್ಯ ತೆರವಾಗಿದ್ದು, ಸದ್ದಿಲ್ಲದೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯದ ಶಿಕ್ಷೆಯ ಆದೇಶಕ್ಕೆ ತಡೆ ಕೋರಿ ಹಾಗೂ ಜಾಮೀನು ಪಡೆಯಲು ಕುಲಕರ್ಣಿ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಶಿಕ್ಷೆಯ ಆದೇಶಕ್ಕೆ ಇನ್ನೂ ತಡೆ ಸಿಕ್ಕಿಲ್ಲ. ಇದರಿಂದಾಗಿ ಧಾರವಾಡ ಗ್ರಾಮೀಣ (71) ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ಕ್ಷೇತ್ರದಲ್ಲಿ ರಾಜಕೀಯ ಗತಿವಿಧಿಗಳು ವೇಗ ಪಡೆದುಕೊಂಡಿವೆ.
ಕಳೆದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಲಕರ್ಣಿ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಮಾಜಿ ಶಾಸಕ ಅಮೃತ ದೇಸಾಯಿ ಅವರು 18 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈಗ ಉಪಚುನಾವಣೆಯ ಸಾಧ್ಯತೆ ಇರುವುದರಿಂದ ಅಮೃತ ದೇಸಾಯಿ ಅವರು ಕ್ಷೇತ್ರದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಮತ ಕ್ಷೇತ್ರದಲ್ಲಿ ಸದ್ಯ ಮಿಂಚಿನ ಸಂಚಾರ ಆರಂಭಿಸಿರುವ ಅವರು, ಮದುವೆ ಸಮಾರಂಭಗಳು ಹಾಗೂ ಗ್ರಾಮದೇವತೆಗಳ ಜಾತ್ರಾ ಮಹೋತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಮೃತ ದೇಸಾಯಿ ಹಾಗೂ ಅವರ ಪತ್ನಿ ಪ್ರಿಯಾ ದೇಸಾಯಿ ಅವರು ದಿನಕ್ಕೆ ನಾಲ್ಕೈದು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಚುನಾವಣೆಗೆ ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ.
ಯೋಗೇಶಗೌಡ ಕೊಲೆ ಪ್ರಕರಣದಿಂದಾಗಿ ಜಿಲ್ಲೆಯ ಪ್ರವೇಶವಿಲ್ಲದೆ, ಹೊರಗಿದ್ದುಕೊಂಡೇ 2023ರ ಸಾರ್ವತ್ರಿಕ ಚುನಾವಣೆ ಎದುರಿಸಿದ್ದ ವಿನಯ ಕುಲಕರ್ಣಿ, 89 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರನ್ನು ಸೋಲಿಸಿದ್ದರು. ಆದರೆ ಈಗ ಜೀವಾವಧಿ ಶಿಕ್ಷೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನ ಅನರ್ಹಗೊಂಡಿದೆ. ವಿನಯ ಕುಲಕರ್ಣಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅವರ ಕುಟುಂಬಸ್ಥರು ಕೂಡ ಹೆಚ್ಚಾಗಿ ಬೆಂಗಳೂರಿನಲ್ಲೇ ಸಮಯ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅವರ ವರ್ಚಸ್ಸು ಉಳಿಸಿಕೊಳ್ಳಲು ಅವರ ಬೆಂಬಲಿಗರು ಸೋಶಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ. ಇತ್ತೀಚೆಗಷ್ಟೇ ಧಾರವಾಡದ ಸುಭಾಷ್ ರಸ್ತೆಯಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದ್ದ ಬೆಂಬಲಿಗರು, ಇದು ವಿರೋಧಿಗಳ ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿನಯ ಕುಲಕರ್ಣಿ ಪರ ಪೋಸ್ಟ್ ಹಾಕುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಕಳೆದ ಏಪ್ರಿಲ್ 15 ರಂದು ವಿನಯ ಕುಲಕರ್ಣಿ ಮತ್ತು ತಂಡ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದರಿಂದ ಶಾಸಕ ಸ್ಥಾನ ಕೈತಪ್ಪಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಉಪಚುನಾವಣೆಯ ಭವಿಷ್ಯವು ಹೈಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಮೇಲೆ ನಿಂತಿದೆ. ಒಂದು ಕಡೆ ಮಾಜಿ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ವಿನಯ ಕುಲಕರ್ಣಿ ಬೆಂಬಲಿಗರು ಸಹಾನುಭೂತಿಯ ಲಾಭ ಪಡೆಯಲು ರಣತಂತ್ರ ಹೆಣೆಯುತ್ತಿರುವುದು ಸುಳ್ಳಲ್ಲ.
