Dharwad

ಏ.29 ರಂದು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಟಿಬೆಟಿಯನ್ ಮೃತದೇಹ ಪತ್ತೆ ಪ್ರಕರಣ….. 3 ಜನ ಆರೋಪಿಗಳ ಅರೆಸ್ಟ್, ಇಬ್ಬರು ಆರೋಪಿಗಳಿಗೆ ಮುಂದುವರೆದ ಶೋಧ.

Share

: ಮೊನ್ನೆಯಷ್ಟೇ ಹುಬ್ಬಳ್ಳಿ, ಧಾರವಾಡ ಬೈಪಾಸ್ ಬಳಿಯ ಹಳಿಯಾಳ ಕೆಳಸೇತುವೆ ಬಳಿ ಟಿಬೆಟ್ ಮೂಲದ ಬೌದ್ಧ ಬಿಕ್ಕುವೊಬ್ಬರನ್ನು ಕೊಲೆ ಮಾಡಿ ತಂದು ಎಸೆದು ಹೋಗಲಾಗಿತ್ತು. ಈ ಕೊಲೆ ಮಾಡಿದವರು ಯಾರು? ಯಾವ ಕಾರಣಕ್ಕೋಸ್ಕರ ಕೊಲೆ ಮಾಡಿದರು ಎಂಬ ಪ್ರಶ್ನೆಗಳು ಉದ್ಭವಿಸುತ್ತಿರುವಾಗಲೇ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವ ಮೂಲಕ ಎಲ್ಲ ಪ್ರಶ್ನೆಗಳಿಗೆ ಇದೀಗ ಉತ್ತರ ನೀಡಿದ್ದಾರೆ.

– ಟಿಬೆಟ್ ಮೂಲದ ಪ್ರಸ್ತುತ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್‌ನಲ್ಲಿದ್ದ 39 ವರ್ಷದ ತಾಶಿ ದೌಂದುಪ್ ಎಂಬ ಬೌದ್ಧ ಬಿಕ್ಕುವನ್ನು ಮಹಾರಾಷ್ಟ್ರ ಕೊಲ್ಲಾಪುರದ ಕೆಲವರು ಕಿಡ್ನ್ಯಾಪ್ ಮಾಡಿದ್ದರು. ಈ ಬಿಕ್ಕು ಬಳಿ ಸಾಕಷ್ಟು ಹಣ ಇರಬಹುದು ಎಂದು ತಿಳಿದು ಕೊಲ್ಲಾಪುರದ ಕೆಲವರು ಇವರನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು. ಈ ವೇಳೆ ಆ ಬೌದ್ಧ ಬಿಕ್ಕು ಬಳಿ ಕಾರಿನಲ್ಲಿಯೇ ದುರುಳರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆ ಬಿಕ್ಕು ಬಳಿ ಬಿಡಿಗಾಸೂ ಇಲ್ಲದೇ ಹೋಗಿದ್ದರಿಂದ ಅಲ್ಲೇ ಆ ವ್ಯಕ್ತಿಯನ್ನು ಕಾಲಿನಿಂದ ಒದ್ದು ಕೊಲೆ ಮಾಡಿದ್ದಾರೆ. ಆನಂತರ ಕಳೆದ ಎಪ್ರೀಲ್ 29 ರಂದು ಹಳಿಯಾಳ ಕೆಳ ಸೇತುವೆ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದರು. ಈ ಕೊಲೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸಂಕೇತ ಯಾದವ್, ವೈಭವ ಚೌಹಾಣ್ ಮತ್ತು ಸಿದ್ದೇಶ ಬೋಸ್ಲೆ ಎಂಬ ಮೂವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

 

ಈ ಕೊಲೆ ಕೇಸ್ ಪತ್ತೆ ಮಾಡುವ ಸಂಬಂಧ ಎಸ್‌ಪಿ ಅವರು 8 ತಂಡಗಳನ್ನು ರಚಿಸಿದ್ದರು. ಕಾರಿನಲ್ಲಿ ಶವ ತಂದು ಎಸೆದು ಹೋಗಿದ್ದ ದುರಳರು ಕಾರಿಗೆ ನಂಬರ್ ಪ್ಲೇಟ್ ಸಹ ಹಾಕಿರಲಿಲ್ಲ. ಹೀಗಾಗಿ ಕೊಲೆಗಾರರನ್ನು ಪತ್ತೆ ಮಾಡುವುದು ಕಷ್ಟದ ಕೆಲಸವೇ ಆಗಿತ್ತು. ಆದರೆ, ಈ ಆರೋಪಿಗಳ ಶವ ಎಸೆದು ಹೋಗುವ ಸಂದರ್ಭದಲ್ಲಿ ಎಲ್‌ಪಿಜಿ ಹಾಕಿಸಿಕೊಳ್ಳಲು ಬಂಕ್ ಒಂದರಲ್ಲಿ ಇಳಿದಿದ್ದರು. ಪೊಲೀಸರು ತಮ್ಮ ಬುದ್ಧಿ ಉಪಯೋಗಿಸಿ ಇದೇ ಬಂಕ್‌ನಲ್ಲಿ ಆರೋಪಿಗಳು ಇಳಿದಿದ್ದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆಯೇ ಇದೀಗ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಆದರೆ, ಕೊಲೆಗೆ ಬಳಸಿದ ಕಾರು ಹಾಗೂ ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರ ಪತ್ತೆ ಕಾರ್ಯ ಕೂಡ ನಡೆಸಿದ್ದಾರೆ. ಈ ಎಲ್ಲ ಆರೋಪಿಗಳು ಕೂಲಿ, ನಾಲಿ ಮಾಡಿ ಜೀವನ ನಡೆಸುತ್ತಿದ್ದವರು ಎಂಬುದು ಗಮನಾರ್ಹ ಸಂಗತಿ.

 

ಎಸ್‌ಪಿ ಗುಂಜನ್ ಆರ್ಯ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಕಮತಗಿ ಮುಂದಾಳತ್ವದಲ್ಲಿ ಒಟ್ಟು 8 ಪೊಲೀಸ್ ತಂಡಗಳು ಈ ಆರೋಪಿಗಳನ್ನು ಪತ್ತೆ ಮಾಡಿದ್ದೇ ರೋಚಕವಾಗಿದೆ. ಹಣದ ಆಸೆಗಾಗಿ ಈ ರೀತಿ ಬೌದ್ಧ ಬಿಕ್ಕುವನ್ನು ಕೊಲೆ ಮಾಡಿದ ಆರೋಪಿಗಳು ಇದೀಗ ಜೈಲು ಸೇರುವಂತಾಗಿದೆ.

ಮಂಜುನಾಥ ಇನ್ ನ್ಯೂಸ್ ಧಾರವಾಡ

Tags:

error: Content is protected !!