• ವೀರಯೋಧ ಮುತ್ತಪ್ಪ ಅಮೀನಭಾವಿ ಪುತ್ಥಳಿ ಅನಾವರಣ
• ಕರಗಾಂವ ಗ್ರಾಮದಲ್ಲಿ ಮೊಳಗಿದ ದೇಶಭಕ್ತಿ ಘೋಷಣೆ
• ವಾಟ್ಸಾಪ್ ಬಿಟ್ಟು ಇತಿಹಾಸ ಓದಿ: ಶ್ರೀಗಳ ಕರೆ
• ಹುತಾತ್ಮ ಯೋಧನ ಕುಟುಂಬಕ್ಕೆ ಭವ್ಯ ಸತ್ಕಾರ

CRPF (ಭಾರತೀಯ ಸೇನೆ) ನಲ್ಲಿ ಸೇವೆ ಸಲ್ಲಿಸುತ್ತಿರುವಾಗ 24 ಡಿಸೆಂಬರ್ 2020 ರಂದು ಹುತಾತ್ಮರಾದ ವೀರಯೋಧ ಮುತ್ತಪ್ಪ ಈರಪ್ಪ ಅಮೀನಭಾವಿ ಅವರ ಪುತ್ಥಳಿ ಅನಾವರಣ ಸಮಾರಂಭವು, ಅವರ ಸ್ವಗ್ರಾಮವಾದ ಚಿಕ್ಕೋಡಿ ತಾಲೂಕಿನ ಕರಗಾಂವನಲ್ಲಿ ನಡೆಯಿತು.
ಬೈಲೂರು ಮಠದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಯಮಕನಮರಡಿಯ ಹುಣಸಿಕೊಳ್ಳಮಠದ ಉತ್ತರಾಧಿಕಾರಿ ಶ್ರೀ ಸಿದ್ದಬಸವ ದೇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಿತು. ಸಹಕಾರಿ ಧುರೀಣ ಡಿ.ಟಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕೋಬ್ರಾ ಕಮಾಂಡೋ ಸ್ಕೂಲ್‌ನ ಡೆಪ್ಯೂಟಿ ಕಮಾಂಡೆಂಟ್ ನರೇಶ್ ಕುಮಾರ್ ಸೇರಿದಂತೆ ಸಾವಿರಾರು ಗ್ರಾಮಸ್ಥರು ಮತ್ತು ದೇಶಪ್ರೇಮಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಮಾತನಾಡಿ, “ವ್ಯಕ್ತಿ ಅಭಿಮಾನಿಯಾಗಬೇಡಿ, ದೇಶದ ಅಭಿಮಾನಿಯಾಗಿ. ದೇಶದ ಬಗ್ಗೆ ಚಿಂತನೆ ಮಾಡುವವನೇ ನಿಜವಾದ ದೇಶಪ್ರೇಮಿ. ಮುತ್ತಪ್ಪ ಅವರ ಸ್ಮಾರಕವು ಕೇವಲ ಗ್ರಾಮದ ಸ್ಮಾರಕವಲ್ಲ, ಇದನ್ನು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಬೇಕು. ಪ್ರತಿಯೊಬ್ಬರೂ ಚಾರಿತ್ರಿಕ, ಸಂಸ್ಕಾರಯುತ ಹಾಗೂ ಆರೋಗ್ಯವಂತ ಜೀವನ ನಡೆಸಿದರೆ ಮಾತ್ರ ದೇಶ ಸದೃಢವಾಗಲು ಸಾಧ್ಯ. ಈಗಿನ ಯುವಜನತೆ ಮತ್ತು ಮಕ್ಕಳು ಕೇವಲ ‘ವಾಟ್ಸಾಪ್ ಯೂನಿವರ್ಸಿಟಿ’ಯಲ್ಲಿ ಕಾಲ ಕಳೆಯುವುದನ್ನು ಬಿಟ್ಟು ಮಹಾಪುರುಷರ ಪುಸ್ತಕಗಳನ್ನು ಓದಬೇಕು,” ಎಂದು ಕರೆ ನೀಡಿದರು.
ಮಾಜಿ ಸೈನಿಕರು ಶಾಲೆಗಳನ್ನು ದತ್ತು ಪಡೆದು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಅವರು ಈ ವೇಳೆ ಕೋರಿದರು. ಇದೇ ಸಂದರ್ಭದಲ್ಲಿ ವೀರಯೋಧ ಮುತ್ತಪ್ಪ ಅವರ ಕುಟುಂಬದವರನ್ನು ಹಾಗೂ ಮಾಜಿ ಸೈನಿಕರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜು ಪಾಟೀಲ, ಪರಪ್ಪ ಕಮತೆ, ಬೀರಪ್ಪ ಮಾಳಿಂಗೆ, ಅರುಣ್ ಮಾಳಿಂಗೆ, ಬಾಳಪ್ಪ ಕುರಣಿ, ಈರಪ್ಪ ಅಮೀನಭಾವಿ, ಮಹಾದೇವಿ ಅಮೀನಭಾವಿ, ಶೃತಿ ಮುತ್ತಪ್ಪ ಅಮೀನಭಾವಿ, ಬಿ.ಎಸ್. ಪಾಟೀಲ, ಅಜಿತ್ ಬಸಗೌಡನವರ, ರಾವುಜಿ ಘೋರ್ಪಡೆ, ಬೀರಪ್ಪ ಪೂಜಾರಿ, ಮಂಜು ಮಾಯಪ್ಪಗೋಳ, ಶಂಕರಾನಂದ ಖೋತ ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಮಾಜಿ ಸೈನಿಕರು ಉಪಸ್ಥಿತರಿದ್ದರು.
