ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿ ಬೀದಿ ನಾಯಿಗಳ ಗುಂಪೊಂದು ಕುರಿ ಮರಿಗಳ ಮೇಲೆ ದಾಳಿ ನಡೆಸಿದ ಪರಿಣಾಮ 6 ಮರಿಗಳು ಸಾವನ್ನಪ್ಪಿ, 8 ಮರಿಗಳಿಗೆ ತೀವ್ರ ಗಾಯಗಳಾಗಿದ್ದು, ಇನ್ನೂ 5 ಮರಿಗಳು ಕಣ್ಮರೆಯಾಗಿರುವ ಘಟನೆ ಶನಿವಾರ ನಡೆದಿದೆ.

ಕುರಿಗಾಯಿ ಅಜೀತ್ ಲಗಮಣ್ಣ ಪೂಜೇರಿ ಅವರಿಗೆ ಸೇರಿದ ಕುರಿ ಮರಿಗಳ ಮೇಲೆ ಈ ದಾಳಿ ನಡೆದಿದ್ದು, ಘಟನೆಯಿಂದ ಕುಟುಂಬಕ್ಕೆ ಭಾರೀ ನಷ್ಟ ಉಂಟಾಗಿದೆ. ಬೀದಿ ನಾಯಿಗಳ ಹಾವಳಿ ಕುರಿತು ಹಲವಾರು ಬಾರಿ ಹುಕ್ಕೇರಿ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕುರಿಗಾಯಿ ಅಜೀತ್ ಅವರಿಗೆ ತಕ್ಷಣ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪರಿಹಾರ ನೀಡದಿದ್ದಲ್ಲಿ ನಾಳೆ ಸತ್ತ ಕುರಿ ಮರಿಗಳೊಂದಿಗೆ ಹುಕ್ಕೇರಿ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಶ್ರೀರಾಮ್ ಸೇನೆ ಉತ್ತರ ಪ್ರಾಂತ ಕಾರ್ಯದರ್ಶಿ ಶಿವರಾಜ್ ಅಂಬಾರಿ ಮಾತನಾಡಿ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪುರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
