2027ರ ಮೇ 4 ರಿಂದ ಸಂಕೇಶ್ವರದ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಆರಂಭವಾಗಲಿದೆ ಎಂದು ಜಾತ್ರಾ ಕಮಿಟಿಯ ಪ್ರಮುಖ ಹಕ್ಕುದಾರರಾದ ಕುನಾಲ ಪಾಟೀಲ ತಿಳಿಸಿದ್ದಾರೆ.


ನಗರದ ಮಹಾಲಕ್ಷ್ಮಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “2026ರ ಜುಲೈ 21 ರಂದು ಮುಂಜಾನೆ 8 ಗಂಟೆಗೆ ಹವಾಲ್ದಾರ ಮನೆಯಿಂದ ಕೋಣ ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ 2027ರ ಮೇ 4 ರಂದು ಮುಂಜಾನೆ 8 ಗಂಟೆಗೆ ಧ್ವಜಾರೋಹಣದೊಂದಿಗೆ ಖಾತೆದಾರ ಪಾಟೀಲ ಮನೆತನದವರಿಂದ ಹಾಲಗಂಬ ಪ್ರತಿಷ್ಠಾಪನೆ, ಸೀಮೆಯಿಂದ ಲಕ್ಷ್ಮಿ ದೇವಿಯನ್ನು ಕರೆತರುವುದು ಹಾಗೂ ದೀಪಕ ಅಸೋದೆ ಅವರಿಂದ ಅಕ್ಕಿ ಬಳಿಯುವ ಕಾರ್ಯಕ್ರಮ ಜರುಗಲಿದೆ. ಬಳಿಕ ದೇವಿಗೆ ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ,” ಎಂದು ವಿವರಿಸಿದರು.
“ಅಂದು ರಾತ್ರಿ ಲಕ್ಷ್ಮಿ ದೇವಿಯ ಸಂಚಾರ ಮತ್ತು ಹಕ್ಕುದಾರರ ಮನೆಗಳಲ್ಲಿ ಉಡಿ ತುಂಬಿಸಿಕೊಂಡು ಬೆಳಗಿನ ಜಾವ ದೇವಿಯನ್ನು ಸ್ಥಾಪನೆ ಮಾಡಲಾಗುವುದು. ಸಾಯಂಕಾಲ ಕೋಣದ ಮೆರವಣಿಗೆ ನಡೆಸಿ, ರಂಗಪ್ರವೇಶದೊಂದಿಗೆ ಲಕ್ಷ್ಮಿ ದೇವಿಯನ್ನು ಸೀಮೆಗೆ ಕಳುಹಿಸಿಕೊಡಲಾಗುವುದು,” ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಕಾರ್ಯಾಧ್ಯಕ್ಷ ಸುನಿಲ ಪರ್ವತರಾವ, ಕಾರ್ಯದರ್ಶಿ ಬಸನಗೌಡಾ ಪಾಟೀಲ, ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ದೇಸಾಯಿ, ಹಕ್ಕುದಾರರಾದ ಗಿರೀಶ ಕುಲಕರ್ಣಿ, ಅಪ್ಪಾಸಾಹೇಬ ಶೆಟ್ಟಿಮನಿ, ಸಂತೋಷ ಹವಾಲ್ದಾರ, ಬಸವನ್ನಿ ಕರ್ದೆಗೌಡಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
