ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದ ಮಹಾಲಕ್ಷ್ಮಿ ದ್ಯಾಮವ್ವಾ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಾಮದೇನು ಮತ್ತು ಕಲ್ಪವೃಕ್ಷವಾಗಿದ್ದಾಳೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ಮಲ್ಲಪ್ಪ ಬಡಿಗೇರ ಅವರು ಹೇಳಿದರು.


ಹಲವಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಮಹಾಲಕ್ಷ್ಮಿ ದ್ಯಾಮವ್ವಾ ದೇವಿಯ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸವದತ್ತಿ ಶಿರಸಂಗಿ ಮಹಾಕಾಳಿಕಾ ಮಂದಿರದ ಅರ್ಚಕರಾದ ಮಹಾದೇವ ಆಚಾರ್ಯ ಅವರು ಮಾತನಾಡಿ, ಮದಮಕ್ಕನಾಳ ಗ್ರಾಮದ ದ್ಯಾಮವ್ವಾ ದೇವಿಯು ಇತಿಹಾಸ ಮತ್ತು ಪುರಾಣ ಪ್ರಸಿದ್ಧಿಯಾಗಿದ್ದು, ಇಂದು ನೂತನ ಮೂರ್ತಿಗೆ ವಿಶೇಷ ಹೋಮ-ಹವನಗಳ ಮೂಲಕ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು. ನಂತರ ಭಕ್ತಾದಿಗಳು ದೇವಿಗೆ ಮಹಾಮಂಗಳಾರತಿ ನೆರವೇರಿಸಿ, ದರ್ಶನ ಪಡೆದು ಪುನೀತರಾದರು.

ಅರ್ಚಕ ಮಲ್ಲಪ್ಪ ಬಡಿಗೇರ ಅವರು ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ನೀಡಿ, ಗ್ರಾಮದ ಮಹಿಳೆಯರು ಪ್ರತಿ ವರ್ಷ ದೇವಿಗೆ ಉಡಿ ತುಂಬುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ ದೇವಿಯಲ್ಲಿ ಮೊರೆ ಹೋಗುತ್ತಾರೆ. ಈ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ದಿನದಿಂದ ದಿನಕ್ಕೆ ದೇವಿಯ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಚನ್ನಬಸಯ್ಯ ಹಿರೇಮಠ, ಶಿವಾನಂದ ನಾಯಕ, ರಾಜು ಮಠಪತಿ, ದೇವೇಂದ್ರ ನಾಯಕ, ಎಸ್. ಕೆ. ಪಾಟೀಲ, ಹನುಮಂತ ಆಚಾರ್ಯ, ಕೆ. ಎಸ್. ಪಾಟೀಲ, ರಾಜು ತೇರಣಿ ಸೇರಿದಂತೆ ಮಹಾಲಕ್ಷ್ಮಿ ಟ್ರಸ್ಟ್ ಕಮಿಟಿಯ ಸದಸ್ಯರು ಹಾಗೂ ಗ್ರಾಮದ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
