ದೇಶದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಭರ್ಜರಿ ಇತಿಹಾಸ ನಿರ್ಮಿಸಿದೆ. ಬಿ.ಇ ಹಾಗೂ ಬಿ.ಟೆಕ್ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳ ಅವಧಿಯಲ್ಲಿ ಫಲಿತಾಂಶವನ್ನು ಪ್ರಕಟಿಸುವ ಮೂಲಕ ವಿಟಿಯು ಇಡೀ ದೇಶದಲ್ಲೇ ಹೊಸ ದಾಖಲೆ ಬರೆದಿದೆ.

ಶುಕ್ರವಾರ ಸಂಜೆ 5:30ಕ್ಕೆ ಕೊನೆಯ ಪರೀಕ್ಷೆ ಮುಕ್ತಾಯವಾಗಿದ್ದು ಕೇವಲ ಹತ್ತೇ ನಿಮಿಷದಲ್ಲಿ ಅಂದರೆ ಸಂಜೆ 5:40ಕ್ಕೆ ವಿಶ್ವವಿದ್ಯಾಲಯವು ಅಧಿಕೃತವಾಗಿ ರಿಸಲ್ಟ್ ಬಿಡುಗಡೆ ಮಾಡಿದೆ. ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ. ಯು. ಜೆ. ಉಜ್ವಲ್ ಅವರು ಜಂಟಿಯಾಗಿ ಈ ಅಪ್ರತಿಮ ಫಲಿತಾಂಶವನ್ನು ಬಿಡುಗಡೆಗೊಳಿಸಿದರು.

ಈ ಬಾರಿ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 56,192 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇಕಡಾ 99.98 ರಷ್ಟು ಅದ್ಭುತ ಫಲಿತಾಂಶ ದಾಖಲಾಗಿದೆ. ವಿಶೇಷವೆಂದರೆ, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಅಂಕಗಳ ವಿವರವನ್ನು ಸಂದೇಶದ ಮೂಲಕ ಕಳುಹಿಸಲಾಗಿದೆ.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಇಡೀ ಮೌಲ್ಯಮಾಪನ ಪ್ರಕ್ರಿಯೆಯನ್ನು ನಿಗದಿತ ಸಮಯಕ್ಕಿಂತ 8 ದಿನ ಮುಂಚಿತವಾಗಿಯೇ ಪೂರ್ಣಗೊಳಿಸಲಾಗಿತ್ತು. ಈ ಹಿಂದೆ ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶ ನೀಡಿ ದಾಖಲೆ ಬರೆದಿದ್ದ ವಿಟಿಯು, ಈ ಬಾರಿ ತನ್ನದೇ ದಾಖಲೆಯನ್ನು ತಾನೇ ಧೂಳೀಪಟ ಮಾಡಿದೆ. ಪ್ರಸ್ತುತ 56,192 ವಿದ್ಯಾರ್ಥಿಗಳ ಫಲಿತಾಂಶ ಕೇವಲ 10 ನಿಮಿಷಗಳಲ್ಲಿ ಬಿಡುಗಡೆಯಾಗಿದೆ.ತ್ವರಿತ ಫಲಿತಾಂಶ ಪ್ರಕಟನೆಗೆ ಶ್ರಮಿಸಿದ ಸಿಬ್ಬಂದಿಗೆ ವಿಸಿ ಪ್ರೊ.ವಿದ್ಯಾಶಂಕರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ https://results.vtu.ac.in/ಗೆ ಭೇಟಿ ನೀಡಿ ತಮ್ಮ ವಿವರವಾದ ಅಂಕಪಟ್ಟಿಯನ್ನು ವೀಕ್ಷಿಸಬಹುದಾಗಿದೆ.
