State

ಸಿದ್ದರಾಮಯ್ಯ 15 ದಿನ ಕಾ ಸುಲ್ತಾನ್…. ಸಂಸದ ಕಾರಜೋಳ

Share

ರಾಜ್ಯ ರಾಜಕೀಯದಲ್ಲಿ ಮತ್ತೆ ಕುರ್ಚಿ ಕಾದಾಟದ ಕಿಚ್ಚು ಹತ್ತಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಇನ್ನು ಕೇವಲ ಹದಿನೈದು ದಿನ ಮಾತ್ರ ಎಂದು ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದು, ಸಿದ್ಧರಾಮಯ್ಯ ಕೇವಲ 15 ದಿನದ ಸರದಾರ ಎಂದಿದ್ದಾರೆ.

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಂಸದ ಗೋವಿಂದ್ ಕಾರಜೋಳ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಒಳಗಿನ ಕಿತ್ತಾಟದಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಕಿಡಿಕಾರಿದರು. ಮೇ 4ರ ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಕುರ್ಚಿಯ ಫಲಿತಾಂಶವೂ ಹೊರಬೀಳಲಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಕೇವಲ 15 ದಿನಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಅವರು “15 ದಿನ ಕಾ ಸುಲ್ತಾನ್” ಎಂದು ಲೇವಡಿ ಮಾಡಿದ ಕಾರಜೋಳ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಮುಖ್ಯಮಂತ್ರಿ ಪಟ್ಟಕ್ಕಾಗಿ ಶಾಲು ಹೊದ್ದುಕೊಂಡು ಸಜ್ಜಾಗಿ ಕುಳಿತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತತ್ತರಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಮತ್ತು ಅವರ ಹಿಂಬಾಲಕರು ಹೈಕಮಾಂಡ್ ಮಟ್ಟದಲ್ಲಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಲಾಬಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಆಡಳಿತ ಪಕ್ಷದ ಗುಂಪುಗಾರಿಕೆಯಿಂದಾಗಿ ಜನಸಾಮಾನ್ಯರ ಸಮಸ್ಯೆಗಳು ಮೂಲೆಗುಂಪಾಗಿವೆ. ಮುಖ್ಯಮಂತ್ರಿಗಳು ತಕ್ಷಣವೇ ವಿಧಾನಸೌಧದಲ್ಲಿ ಕುಳಿತು ಆಡಳಿತದ ಕಡೆ ಗಮನಹರಿಸಬೇಕು. ಪ್ರಚಾರದ ಗೀಳು ಬಿಟ್ಟು, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪ್ರತಿ ಜಿಲ್ಲೆಗೆ ತಲಾ 50 ಲಕ್ಷ ರೂಪಾಯಿಗಳನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಕಾರಜೋಳ ಅವರು ಸರ್ಕಾರವನ್ನು ಒತ್ತಾಯಿಸಿದರು.

Tags:

error: Content is protected !!