ದಾವಣಗೆರೆ ಬೆನ್ನಲ್ಲೇ ಈಗ ಬಾಗಲಕೋಟೆ ಕಾಂಗ್ರೆಸ್‌ನಲ್ಲೂ ಬಂಡಾಯದ ಬಿಸಿ ಏರಿದೆ. ಉಪಚುನಾವಣೆ ಹೊತ್ತಲ್ಲೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಸೇರಿದಂತೆ ಮೂವರು ಪ್ರಮುಖ ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಿ ಜಿಲ್ಲಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಉಪಚುನಾವಣೆಯ ಅಖಾಡ ಸಜ್ಜಾಗುತ್ತಿರುವ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಬೀದಿಗೆ ಬಂದಿದೆ. ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧವಾಗಿ ಮತ್ತು ಸಂಘಟನೆಗೆ ಹಿನ್ನಡೆಯಾಗುವಂತೆ ನಡೆದುಕೊಂಡ ಆರೋಪದ ಮೇಲೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ, ಕಮತಗಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಗುರು ಪಾಟೀಲ ಹಾಗೂ ರಮೇಶ್ ಜಮಖಂಡಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಈ ಕಠಿಣ ಕ್ರಮ ಕೈಗೊಂಡಿದ್ದು, ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಮತಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಮತ್ತು ಇತರ ಚುನಾಯಿತ ಸದಸ್ಯರು ನೀಡಿದ ದೂರಿನನ್ವಯ ಈ ಕ್ರಮ ಜರುಗಿಸಲಾಗಿದೆ. ಈ ಮೂವರು ಮುಖಂಡರು ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಲಿಖಿತ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷರು ಈ ಹಿಂದೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದರು. ಆದರೆ, ಆರೋಪಿ ಮುಖಂಡರಿಂದ ಬಂದ ಉತ್ತರ ತೃಪ್ತಿಕರವಾಗಿಲ್ಲದ ಕಾರಣ, ಶಿಸ್ತು ಕ್ರಮದ ಭಾಗವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಆದೇಶ ಹೊರಡಿಸಲಾಗಿದೆ.
