ಅನ್ನು ಕಪೂರ್ ಅಭಿನಯದ ‘ಹಮಾರೆ ಬಾರಾಹ್’ ಚಲನಚಿತ್ರವನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧಿಸಿ ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಹಿಂದಿ ಭಾಷೆಯ ‘ಹಮಾರೆ ಬಾರಾಹ್’ ಚಲನಚಿತ್ರದಲ್ಲಿ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಚಲನಚಿತ್ರ ದೇಶಾದ್ಯಂತ ವಿವಾದ ಸೃಷ್ಟಿಸಿರುವ ಸಮಯದಲ್ಲೇ ಕರ್ನಾಟಕದಲ್ಲಿ ನಿಷೇಧ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ವಿವಾದಿತ ಸಿನಿಮಾದ ಟ್ರೈಲರ್ ಅನ್ನು ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನೆಮಾ ಮಂದಿರ, ಖಾಸಗಿ ಟಿವಿ ಚಾನಲ್ ಸೇರಿದಂತೆ ಯಾವುದೇ ರೀತಿಯಲ್ಲೂ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ರಾಜ್ಯ ಸರಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ರಾಜ್ಯ ಸರಕಾರದ ಆದೇಶವನ್ನು ಯಾರಾದರೂ ಉಲ್ಲಂಘಿಸಿದ್ದು ಕಂಡುಬಂದಲ್ಲಿ, ಕಾನೂನು ರೀತ್ಯಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ.

ಈ ಮೊದಲು ಈ ವಿವಾದಿತ ಹಮಾರೆ ಬಾರಾಹ್ ಚಿತ್ರವನ್ನು ಜೂನ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಪ್ರಸ್ತುತ ಬಾಂಬೆ ಹೈಕೋರ್ಟ್ ಕೂಡ ಜೂನ್ 14 ರವರೆಗೆ ಈ ಚಲನಚಿತ್ರ ಬಿಡುಗಡೆಗೆ ತಡೆ ನೀಡಿದೆ. ಇತ್ತೀಚೆಗೆ ಪುಣೆಯ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್, ‘ಹಮಾರಾ ಬರಾ’ ಚಿತ್ರದ ಬಿಡುಗಡೆ ದಿನಾಂಕವನ್ನು ಜೂನ್ 14ಕ್ಕೆ ಮುಂದೂಡಿದೆ.
