BELAGAVI

ಬೆಳಗಾವಿ ಲಕ್ಷ್ಮೀ ನಗರದ ಮಹಾಲಕ್ಷ್ಮೀ ದೇವಸ್ಥಾನದ 33ನೇ ವಾರ್ಷಿಕೋತ್ಸವ ಪ್ರಾಣಿ ಬಲಿ ಹಾಗೂ ಕಾಣಿಕೆ ಪ್ರಥೆಗೆ ಇತಿಶ್ರೀ ಹಾಡಿ ಮಾದರಿಯಾದ ಗ್ರಾಮಸ್ಥರು!

Share

ಮೂಢನಂಬಿಕೆ ಮತ್ತು ಅನಿಷ್ಟ ಪದ್ಧತಿಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಬೆಳಗಾವಿ ಸಮೀಪದ ಹಿಂಡಲಗಾ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀ ನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಸಮಿತಿ ಸಮಾಜಕ್ಕೆ ಹೊಸ ಹಾದಿ ತೋರಿಸಿದೆ. ದೇವಸ್ಥಾನದ 33ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಾಣಿ ಬಲಿ ಮತ್ತು ಕಾಣಿಕೆ ಸ್ವೀಕರಿಸುವ ಸಂಪ್ರದಾಯಗಳನ್ನು ಸಂಪೂರ್ಣವಾಗಿ ಕೈಬಿಟ್ಟು, ಕೇವಲ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಬ್ಬವನ್ನು ಆಚರಿಸಿ ಮಾದರಿಯಾಗಿದ್ದಾರೆ.

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಷ್ಮೀ ನಗರದ ಶ್ರೀ ಮಹಾಲಕ್ಷ್ಮಿ ಸಮಾಜ ಮಂದಿರದಲ್ಲಿ 33ನೇ ವರ್ಷದ ವಾರ್ಷಿಕೋತ್ಸವವನ್ನು ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಬಳಿಕ ಸಾಂಪ್ರದಾಯಿಕ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ದೇವಿಯ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಹಬ್ಬದ ದಿನದಂದು ಮಾಂಸಾಹಾರವನ್ನು ಸಂಪೂರ್ಣವಾಗಿ ವರ್ಜಿಸಿ, ಸಾವಿರಾರು ಭಕ್ತರಿಗೆ ಸಿಹಿ ಉಟದ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ ಸಾಮಾಜಿಕ ಕಳಕಳಿಯ ಭಾಗವಾಗಿ ‘ಎಸ್‌ಬಿಜಿ’ ಸಂಸ್ಥೆಯ ಸಹಯೋಗದಲ್ಲಿ ಗ್ರಾಮಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಕುರಿತು ಮಾಹಿತಿ ನೀಡಿದ ಶ್ರೀ ಮಹಾಲಕ್ಷ್ಮಿ ಕಲ್ಚರಲ್ ಆಂಡ್ ಸೋಶಿಯಲ್ ಯೂನಿಯನ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ದತ್ತಾಜೀರಾವ್ ಕಾನೂರಕರ್, ದೇವಸ್ಥಾನದ ಸ್ಥಾಪನೆಯಾದ ದಿನದಿಂದಲೂ ಇಲ್ಲಿ ಪ್ರಾಣಿ ಬಲಿ ಹಾಗೂ ಆಹೇರ್‌ನಂತಹ ಯಾವುದೇ ಅನಿಷ್ಟ ಪದ್ಧತಿಗಳಿಗೆ ಅವಕಾಶ ನೀಡಿಲ್ಲ. ಇದೊಂದು ಸಂಪೂರ್ಣ ಸಾಮಾಜಿಕ ಮತ್ತು ಕೌಟುಂಬಿಕ ಉತ್ಸವವಾಗಿದ್ದು, ಇತರ ಗ್ರಾಮಗಳಿಗೂ ಮಾದರಿಯಾಗಿದೆ ಎಂದರು. ಉತ್ಸವದ ಅಂಗವಾಗಿ ಲಕ್ಷ್ಮಿ ಕಾನೂರಕರ್ ಮತ್ತು ತಂಡದವರು ದೇವಿಗೆ ಆಕರ್ಷಕ ಆಲಂಕಾರ ಮಾಡಿದ್ದರು. ಈ ಸಂದರ್ಭದಲ್ಲಿ ಕೃಷ್ಣಾ ಬಾಡಿವಾಲೆ, ಪ್ರಾಜಕ್ತಾ ಕೇಕರೆ, ಸುರೇಶ್ ಪಾಟೀಲ್, ರಾಜನ್ ಟಾಕಳಕರ್, ಶಿವಾಜಿರಾವ್ ಬಾಡಿವಾಲೆ, ಶಂಕರ್ ಗರ್ಡೆ, ದಿನಕರ್ ಗವಸ್, ಕಿಶೋರ್ ಉರಣಕರ್, ಶ್ರೀಕಾಂತ್ ಲೋಕರೆ, ಸಚ್ಚಿದಾನಂದ ಚಿಕ್ಕೋರ್ಡೆ ಸೇರಿದಂತೆ ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!