ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿರುವ ಬೆನ್ನಲ್ಲೇ ವಿಜಯನಗರ ಸಂಸದ ಇ. ತುಕಾರಾಂ ತಮ್ಮ ಪತ್ನಿಗೆ ಸಚಿವ ಸ್ಥಾನ ನೀಡುವಂತೆ ಪರೋಕ್ಷವಾಗಿ ಬ್ಯಾಟ್ ಬೀಸಿದ್ದಾರೆ. ಮಹಿಳಾ ಮತ್ತು ವಾಲ್ಮೀಕಿ ಸಮುದಾಯದ ಕೋಟಾದಡಿ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಮನವರಿಕೆ ಮಾಡುವುದಾಗಿ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಸರ್ಕಸ್ ನಡುವೆ ಸಂಸದ ಇ. ತುಕಾರಾಂ ಅವರು ತಮ್ಮ ಪತ್ನಿಗೆ ಸಚಿವ ಸ್ಥಾನ ಸಿಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಜಯನಗರದಲ್ಲಿ ಮಾತನಾಡಿದ ಅವರು, ನಾನು ನಾಲ್ಕು ಬಾರಿ ಶಾಸಕನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷಕ್ಕೆ ಮತ್ತಷ್ಟು ಅನುಕೂಲವಾಗಬೇಕಾದರೆ ನಮ್ಮ ಕುಟುಂಬಕ್ಕೆ, ಅದರಲ್ಲೂ ಮಹಿಳೆಗೆ ಸಚಿವ ಸ್ಥಾನ ನೀಡಬೇಕು ಎಂದು ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಇಂದು ದೇಶದ ರಾಷ್ಟ್ರಪತಿಗಳೇ ವಾಲ್ಮೀಕಿ ಸಮುದಾಯದ ಮಹಿಳೆಯಾಗಿದ್ದಾರೆ, ಅದೇ ರೀತಿ ರಾಜ್ಯದಲ್ಲೂ ವಾಲ್ಮೀಕಿ ಮಹಿಳೆಗೆ ಸಚಿವ ಸ್ಥಾನ ನೀಡಿದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಇತಿಹಾಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು ಮತ್ತು ಮೊದಲಿನಿಂದಲೂ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾ ಬಂದಿದೆ ಎಂದು ತುಕಾರಾಂ ಸ್ಮರಿಸಿದರು. ಈ ನಿಟ್ಟಿನಲ್ಲಿ ವರಿಷ್ಠರಿಗೆ ಮನವರಿಕೆ ಮಾಡಿಕೊಡುತ್ತೇನೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡಿದ್ದ ಭರವಸೆಯನ್ನು ಖಂಡಿತವಾಗಿಯೂ ಈಡೇರಿಸಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಸಂಸದ ತುಕಾರಾಂ ಹೇಳಿದ್ದಾರೆ.
