ಆಸ್ತಿ ವಿವಾದ ಇಬ್ಬರ ಜೀವವನ್ನೇ ಬಲಿ ಪಡೆದಿದೆ. ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ಅಳಿಯ ಮತ್ತು ಅತ್ತೆಯ ಬರ್ಬರ ಹತ್ಯೆ ನಡೆದಿದೆ.
ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮೃತರನ್ನು ರಮೇಶ್ ಹಣಮಂತ ನಾಯ್ಕರ (29) ಹಾಗೂ ಬಸವ್ವ ಭೀಮಪ್ಪ ನಾಯ್ಕರ (60) ಎಂದು ಗುರುತಿಸಲಾಗಿದೆ. ಆಸ್ತಿ ಸಂಬಂಧಿತ ವಿಷಯಕ್ಕೆ ಉಂಟಾಗಿದ್ದ ಕಲಹ ವಿಕೋಪಕ್ಕೆ ತಿರುಗಿ ಈ ಘೋರ ಕೃತ್ಯ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಒಂದೇ ಗ್ರಾಮದಲ್ಲಿ ಇಬ್ಬರು ಕೊಲೆಯಾಗಿರುವುದು ಗ್ರಾಮಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮಡಿವಾಳರ ಅವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದಿರುವ ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
