yargatti

ಫೇಸ್‌ಬುಕ್ ಪ್ರೀತಿ ಜಾಲ: ವಿದೇಶಿ ಗಿಫ್ಟ್ ಆಸೆಗೆ ಬಿದ್ದು 7 ಲಕ್ಷ ಕಳೆದುಕೊಂಡ ಯರಗಟ್ಟಿ ವ್ಯಕ್ತಿ!

Share

ಫೇಸ್‌ಬುಕ್‌ನಲ್ಲಿ ಅಪರಿಚಿತರ ಸ್ನೇಹ ಮಾಡುವ ಮುನ್ನ ಎಚ್ಚರ! ವಿದೇಶದಿಂದ ಕೋಟಿ ಮೌಲ್ಯದ ಉಡುಗೊರೆ ಬಂದಿದೆ ಎಂದು ನಂಬಿಸಿ, ಗ್ರಾಮೀಣ ಭಾಗದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 7 ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆದಿದೆ.

ಯರಗಟ್ಟಿ ತಾಲೂಕಿನ ಕುರುಬಗಟ್ಟಿ ಗ್ರಾಮದ ನಿವಾಸಿ ಲಕ್ಕಪ್ಪ ಸನ್ನಿಂಗನವರ ಎಂಬುವವರೇ ಸೈಬರ್ ವಂಚನೆಗೆ ಒಳಗಾದ ದುರ್ದೈವಿ. ಕೆಲ ತಿಂಗಳ ಹಿಂದೆ ಇವರಿಗೆ ‘ರೋಸಂಜೆಲ್‌ಪಾಜ್’ ಎಂಬ ಫೇಸ್‌ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಷ್ಟ್ ಬಂದಿದ್ದು, ಅದನ್ನು ಸ್ವೀಕರಿಸಿದ ಬಳಿಕ ಆರೋಪಿತರು ವಾಟ್ಸಾಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ತಾನು ವಿದೇಶದಲ್ಲಿ ವಾಸಿಸುವ ಮಹಿಳೆ ಎಂದು ಪರಿಚಯಿಸಿಕೊಂಡು, ಕಾಲಕ್ರಮೇಣ ಪ್ರೀತಿಯ ನಾಟಕವಾಡಿ ಲಕ್ಕಪ್ಪ ಅವರ ವಿಶ್ವಾಸ ಗಳಿಸಿದ್ದರು. ತದನಂತರ, ಪ್ರೀತಿಯ ನೆನಪಿಗಾಗಿ 80 ಸಾವಿರ ಪೌಂಡ್‌ (ಸುಮಾರು 1.03 ಕೋಟಿ ರೂ.) ಮೌಲ್ಯದ ಬೆಲೆಬಾಳುವ ಉಡುಗೊರೆ ಮತ್ತು ನಗದು ಪಾರ್ಸೆಲ್ ಕಳುಹಿಸಿರುವುದಾಗಿ ನಂಬಿಸಿದ್ದರು.

ಬಳಿಕ ಭಾರತಕ್ಕೆ ಪಾರ್ಸೆಲ್ ತಲುಪಿದೆ ಎಂದು ನಂಬಿಸಿದ ವಂಚಕರು, ಅದರ ಕ್ಲಿಯರೆನ್ಸ್ ಶುಲ್ಕ, ಮನಿ ಲಾಂಡರಿಂಗ್ ಪ್ರಮಾಣಪತ್ರ, ಕಸ್ಟಮ್ಸ್ ಹಾಗೂ ಆದಾಯ ತೆರಿಗೆ ಪಾವತಿಯ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 7.05 ಲಕ್ಷ ರೂಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇಷ್ಟಾದರೂ ಪಾರ್ಸೆಲ್ ಸಿಗದೇ ಮತ್ತಷ್ಟು ಹಣ ಕೇಳಿದಾಗ ಅನುಮಾನಗೊಂಡು ಲಕ್ಕಪ್ಪ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಈ ಕುರಿತು ಸದ್ಯ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಪರಿಚಿತರ ಮೋಸದ ಜಾಲಕ್ಕೆ ಬೀಳದಂತೆ ಹಾಗೂ ವಂಚನೆಗೊಳಗಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Tags:

error: Content is protected !!