BALLARI

ನಾಪತ್ತೆ ಪ್ರಕರಣಕ್ಕೆ ಭೀಕರ ತಿರುವು; ಬಡ್ಡಿ ಹಣಕ್ಕಾಗಿ ಸ್ನೇಹಿತನನ್ನೇ ಕೊಂದು ಸುಟ್ಟು ಹಾಕಿದ ಪಾಪಿಗಳು!

Share

ಹಣಕಾಸಿನ ವಿಚಾರಕ್ಕೆ ಸ್ನೇಹಿತರೇ ಸೇರಿ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ನಾಪತ್ತೆ ಪ್ರಕರಣದ ತನಿಖೆ ವೇಳೆ ಈ ಘೋರ ಕೃತ್ಯ ಬಯಲಾಗಿದ್ದು, ಸಾಕ್ಷಿ ನಾಶಕ್ಕೆ ಮೃತದೇಹವನ್ನೇ ಸುಟ್ಟು ಹಾಕಿರುವುದು ಬೆಚ್ಚಿಬೀಳಿಸಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕಳೆದ ಅಕ್ಟೋಬರ್ 29ರಂದು ಹನುಮಂತಪ್ಪ (38) ಎಂಬುವವರು ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಎಸ್. ಲಕ್ಷ್ಮೀ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ನಾಪತ್ತೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಇದೀಗ ಭೀಕರ ಕೊಲೆ ರಹಸ್ಯ ಬಯಲಾಗಿದೆ. ಒಂದು ಲಕ್ಷ ರೂಪಾಯಿ ಹಣದ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹನುಮಂತಪ್ಪನ ಸ್ನೇಹಿತರಾದ ಉಪೇಂದ್ರ, ಶಶಿಕುಮಾರ್, ಮಲ್ಲಿಕಾರ್ಜುನ ಹಾಗೂ ಗಂಗಾಧರ ಎಂಬ ನಾಲ್ವರು ಸೇರಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಹನುಮಂತಪ್ಪನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಆರೋಪಿಗಳು, ಬಳಿಕ ಸಾಕ್ಷಿ ನಾಶಪಡಿಸಲು ಮೃತದೇಹವನ್ನು ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಅರೆಬೆಂದ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೆರೆ ಮತ್ತು ಕಾಲುವೆಗೆ ಎಸೆದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿ ಆರೋಪಿಗಳು ಪೆಟ್ರೋಲ್ ಕೊಂಡೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮೃತದೇಹದ ಅವಶೇಷಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇತ್ತ ಪತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಶೀಘ್ರವೇ ಮೃತದೇಹ ಪತ್ತೆಹಚ್ಚಿ ತಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

Tags:

error: Content is protected !!