ಬೆಳಗಾವಿಯ ಕಣಬರ್ಗಿ ಬುಡಾ ಸ್ಕೀಮ್ ಭೂಸ್ವಾಧೀನ ಮತ್ತು ರಸ್ತೆ ಕಾಮಗಾರಿ ವಿವಾದ ಮತ್ತೆ ಭುಗಿಲೆದ್ದಿದೆ. ರೈತರ ಒಪ್ಪಿಗೆ ಇಲ್ಲದೆ ಫಲವತ್ತಾದ ಜಮೀನಿನಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸಿ, ಸಮೀಕ್ಷೆ ನಡೆಸುವಂತೆ ಬುಡಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಕಣಬರ್ಗಿಯಲ್ಲಿ ಬುಡಾ (BUDA) ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಭೂಸ್ವಾಧೀನ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. 2007ರಲ್ಲಿ 160 ಎಕರೆ ಫಲವತ್ತಾದ ಭೂಮಿಗೆ ನೋಟಿಸ್ ನೀಡಲಾಗಿದ್ದು, ಈಗ ರೈತರ ಒಪ್ಪಿಗೆಯಿಲ್ಲದೆ ಸುಮಾರು 15 ಎಕರೆ ಜಮೀನಿನಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಶ್ರೀ ಸಿದ್ಧೇಶ್ವರ ರೈತ ಸಂಘಟನೆಯ ಪ್ರಮುಖರಾದ ಬಬನ್ ಮಲಾಯಿ ಆರೋಪಿಸಿದ್ದಾರೆ. ಸ್ವಇಚ್ಛೆಯಿಂದ ಸಹಿ ಹಾಕಿದವರ ಜಮೀನಿನ ಕಾಮಗಾರಿಗೆ ತಮ್ಮ ವಿರೋಧವಿಲ್ಲದಿದ್ದರೂ, ನ್ಯಾಯಾಲಯದಲ್ಲಿರುವ 25 ಎಕರೆ ಭೂಮಿ ಹಾಗೂ ಸರ್ವೆ ನಂಬರ್ 500, 502, 511, 513 ಮತ್ತು 514ರ ವ್ಯಾಪ್ತಿಯ ಫಲವತ್ತಾದ ಜಮೀನಿನಲ್ಲಿ ಗುತ್ತಿಗೆದಾರರು ದಾದಾಗಿರಿ ನಡೆಸಿ ನಿರ್ಮಿಸಿರುವ ರಸ್ತೆಗಳನ್ನು ಮೊದಲು ಬಂದ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ, 30 ವರ್ಷಗಳ ಹಳೆಯದಾದ 290 ಮನೆಗಳನ್ನು ಸಕ್ರಮಗೊಳಿಸುವುದಾಗಿ ಶಾಸಕ ಆಸೀಫ್ ಸೇಠ್ ಹಾಗೂ ಬುಡಾ ಅಧ್ಯಕ್ಷರು ಭರವಸೆ ನೀಡಿದ್ದು, ಕೃಷಿಕ ಉದಯ್ ಸಾವಕಾರ್ ಅವರ 16 ಗುಂಟೆ ಜಮೀನಿಗೆ ಜಮಾ ಮಾಡಿರುವ 4 ಲಕ್ಷ ರೂಪಾಯಿ ಹಣವನ್ನು ವಾಪಸ್ ಪಡೆದು ಅವರಿಗೆ ಜಮೀನು ಉಳಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಕಣಬರ್ಗಿ 61ನೇ ನಂಬರ್ ಸ್ಕೀಮ್‌ಗೆ ಸಂಬಂಧಿಸಿದಂತೆ ಕನ್ಸೆಂಟ್ ನೀಡಿದವರು ಹಾಗೂ ಅವಾರ್ಡ್ ಪ್ರಕ್ರಿಯೆಯಲ್ಲಿರುವ ಎಲ್ಲಾ ರೈತರು ಇಂದು ಒಗ್ಗಟ್ಟಾಗಿ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಈ ವೇಳೆ ಮಾತನಾಡಿದ ರೈತ ಮುಖಂಡ ಶಿವಾಜಿರಾವ್ ಸುಂಠಣಕರ್, ಈ ಹಿಂದೆ ನಮ್ಮನ್ನು ಮೂರು ಭಾಗಗಳಾಗಿ ವಿಭಜಿಸಲಾಗಿತ್ತು, ಆದರೆ ಈಗ ಅಶೋಕ ನಾಯ್ಕ್ ಮತ್ತು ಬಬನ್ ಮಲಾಯಿ ನೇತೃತ್ವದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ರೈತರ ಪ್ರತಿಯೊಂದು ಇಂಚು ಭೂಮಿ ಮತ್ತು ಮನೆಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು, ರೈತರ ಅನುಪಸ್ಥಿತಿಯಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಎಚ್ಚರಿಸಿದ್ದಾರೆ. ನಮ್ಮ ಪ್ರಮುಖ ಬೇಡಿಕೆಗಳು ಈಡೇರುವವರೆಗೆ ಬುಡಾ ಅಧಿಕಾರಿಗಳು ಯಾವುದೇ ಆಕ್ಷನ್ ತೆಗೆದುಕೊಳ್ಳಬಾರದು, ಬದಲಾಗಿ ಎಲ್ಲಾ ರೈತರನ್ನು ಒಟ್ಟಾಗಿ ಕೂರಿಸಿ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
