ಬೆಳಗಾವಿ ಅಧಿವೇಶನ ಸಿದ್ಧತೆ ಟೆಂಡರ್‌ನಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಜೋರಾಗಿದೆ. ಹೊರಗಿನವರಿಗೆ ಮಣೆ ಹಾಕಲಾಗುತ್ತಿದೆ ಎಂದು ಶಾಸಕ ಅಭಯ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸಭಾಧ್ಯಕ್ಷರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.
ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ಬೆಳಗಾವಿ ವಿಧಾನಸಭಾ ಅಧಿವೇಶನದ ಕಾಮಗಾರಿ ಮತ್ತು ಸೇವೆಗಳ ಗುತ್ತಿಗೆಯಲ್ಲಿ ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ, ಬೇರೆ ಜಿಲ್ಲೆಯವರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಪೆಂಡಾಲ್, ರಸ್ತೆ ಹಾಗೂ ಆಹಾರ ವಿಭಾಗದ ಗುತ್ತಿಗೆದಾರರು ಒಗ್ಗೂಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದು, KTPP ಕಾಯ್ದೆ ದುರುಪಯೋಗಪಡಿಸಿಕೊಂಡು ಬೇಕಾದವರಿಗೆ ಗುತ್ತಿಗೆ ನೀಡಲಾಗುತ್ತಿದೆ ಮತ್ತು ಇದರಲ್ಲಿ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.
ಈ ವಿಚಾರವನ್ನು ವಿಧಾನಸಭಾಧ್ಯಕ್ಷರ ಗಮನಕ್ಕೆ ತರುವುದಾಗಿ ಶಾಸಕ ಅಭಯ್ ಪಾಟೀಲ್ ತಿಳಿಸಿದ್ದು, ಬೆಳಗಾವಿಯಲ್ಲಿ ಅಧಿವೇಶನ ನಡೆದು ಸ್ಥಳೀಯರಿಗೆ ಅನುಕೂಲವಾಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ಅಧಿವೇಶನ ದಿನಾಂಕ ನಿಗದಿಯಾಗಿ ತಿಂಗಳಾದರೂ ಏಕೆ ಶಾರ್ಟ್ ಟರ್ಮ್ ಟೆಂಡರ್ ಕರೆದಿಲ್ಲ ಎಂದು ಕೇಳಿರುವ ಅವರು, ಪಾರದರ್ಶಕವಾಗಿ ಟೆಂಡರ್ ಕರೆದು ಕಡಿಮೆ ದರದವರಿಗೆ ನೀಡಬೇಕು, ಇಲ್ಲದಿದ್ದರೆ ಇದು ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
