BALLARI

ಲಕ್ಷ್ಮೀ ಪೂಜೆ ಹೆಸರಲ್ಲಿ ಯುವತಿಯರ ಬೆತ್ತಲೆ ಪೂಜೆ, ಲೈಂಗಿಕ ದೌರ್ಜನ್ಯ: ಕಾಮುಕ ಅರ್ಚಕ ಅಂದರ್!

Share

ಬಳ್ಳಾರಿಯಲ್ಲಿ ಲಕ್ಷ್ಮೀ ಪೂಜೆಯ ನೆಪದಲ್ಲಿ ಬಡ ಯುವತಿಯರನ್ನು ಪುಸಲಾಯಿಸಿ, ಬೆತ್ತಲೆ ಪೂಜೆ ಮಾಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಪ್ರಕರಣದ ಮುಖ್ಯ ಆರೋಪಿ ಕಮ್ಮಾರ ಕೃಷ್ಣಮಾಚಾರಿಯನ್ನು ಪೊಲೀಸರು ಬಲೆಗೆ ಕೆಡವಿದ್ದು, ಈವರೆಗೆ ಒಟ್ಟು 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಳ್ಳಾರಿ ಎಸ್ಪಿ ಡಾ. ಸುಮನ್ ಪನ್ನೇಕರ್ ಮಾಹಿತಿ ನೀಡಿದ್ದಾರೆ.

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ನವೆಂಬರ್ 10ರಂದು ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವೇಶ್ಯಾವಾಟಿಕೆ ಮತ್ತು ಲೈಂಗಿಕ ದೌರ್ಜನ್ಯ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಕಮ್ಮಾರ ಕೃಷ್ಣಮಾಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಬಳಿಯ ಆಕತೋಟಪಲ್ಲಿಯ ಮಹಾಕಾಳಿ ದೇವಸ್ಥಾನದ ಅರ್ಚಕನಾಗಿದ್ದ ಈತ, ಹಣದ ಆಮಿಷವೊಡ್ಡಿ ಬಡ ಹೆಣ್ಣು ಮಕ್ಕಳು ಹಾಗೂ ಮಹಿಳೆಯರನ್ನು ಲಕ್ಷ್ಮೀ ಪೂಜೆಯ ಹೆಸರಿನಲ್ಲಿ ಪುಸಲಾಯಿಸಿ ಬೆತ್ತಲೆ ಪೂಜೆ ಮಾಡಿಸುತ್ತಿದ್ದ. ಬಳಿಕ ಅವರ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿ ವಂಚಿಸುತ್ತಿದ್ದ. ಎಪಿಎಂಸಿ ಠಾಣೆ ಪೊಲೀಸರು ಹಾಗೂ ‘ಅಕ್ಕ ಪಡೆ’ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಜಾಲ ಬಯಲಾಗಿತ್ತು.

ಪ್ರಕರಣ ಬೆಳಕಿಗೆ ಬಂದಾಗಿನಿಂದ ಶಬರಿಮಲೆ, ವಿಜಯವಾಡ ಹಾಗೂ ತಿರುಪತಿಯಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು, ಮೊಬೈಲ್ ಟವರ್ ಲೊಕೇಶನ್ ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಬೆನ್ನಟ್ಟಿದ ಪೊಲೀಸರು, ಬಸ್ ಮೂಲಕ ಆಂಧ್ರದ ಶ್ರೀಶೈಲಂಗೆ ತೆರಳುತ್ತಿದ್ದ ವೇಳೆ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಎಸ್ಪಿ ಡಾ. ಸುಮನ್ ಪನ್ನೇಕರ್ ತಿಳಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಮುಖ್ಯ ಆರೋಪಿ ಸೇರಿದಂತೆ ಒಟ್ಟು 15 ಮಂದಿಯನ್ನು ಬಂಧಿಸಲಾಗಿದ್ದು, ಈ ಜಾಲದ ಅಂತಾರಾಜ್ಯ ನಂಟು ಹಾಗೂ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ಎಸ್ಪಿ ಅವರು ತಿಳಿಸಿದ್ದಾರೆ.

Tags:

error: Content is protected !!