Athani

ಅಥಣಿಯಲ್ಲೇ ನಿಂತು ಸವದಿಗೆ ಟಾಂಗ್ ಕೊಟ್ಟ ರಮೇಶ್ ಜಾರಕಿಹೊಳಿ:

Share

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮತ್ತೆ ಹಳೆಯ ದ್ವೇಷ-ಅಸಮಾಧಾನಗಳು ಮುನ್ನೆಲೆಗೆ ಬಂದಿವೆ. ಲಕ್ಷ್ಮಣ್ ಸವದಿ ಅವರ ತವರು ಕ್ಷೇತ್ರ ಅಥಣಿಯಲ್ಲೇ ನಿಂತು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸವದಿ ಅವರ ಹೇಳಿಕೆಗಳು ಮತ್ತು ಪ್ರತ್ಯೇಕ ಜಿಲ್ಲೆಯ ಬೇಡಿಕೆಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ಅವರ ಹೆಸರನ್ನು ಪ್ರಸ್ತಾಪಿಸದೇ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಲಕ್ಷ್ಮಣ್ ಸವದಿ ಸಹಕಾರ ಸಚಿವರಾದ ಬಳಿಕ ತಾವು ಅಥಣಿಗೆ ಬಂದಿಲ್ಲವೆಂಬ ಮಾತು ಸತ್ಯಕ್ಕೆ ದೂರವಾಗಿದೆ ಎಂದಿರುವ ಜಾರಕಿಹೊಳಿ, “ನಾವು ಯಾರಿಗೂ ಅಂಜುವ ಮಗನಲ್ಲ” ಎಂದು ಸವಾಲು ಹಾಕಿದ್ದಾರೆ. ಸ್ಥಾನಮಾನ ಮತ್ತು ಗೌರವದ ವಿಚಾರದಲ್ಲಿ ಆ ಕಡೆ-ಈ ಕಡೆ ಓಡಾಡುವ ಬದಲು ತಾವು ಇರುವಲ್ಲಿಯೇ ನಿಂತು ಪಕ್ಷಕ್ಕಾಗಿ ದುಡಿಯುವುದು ತಮ್ಮ ನಿಲುವು ಎಂದು ಪರೋಕ್ಷವಾಗಿ ಸವದಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ, ಅಥಣಿ ಮತ್ತು ಬೈಲಹೊಂಗಲ ಪ್ರತ್ಯೇಕ ಜಿಲ್ಲೆಗಳ ಬಗ್ಗೆ ಲಕ್ಷ್ಮಣ್ ಸವದಿ ಕೇಳಿರುವುದಕ್ಕೆ ಪ್ರತಿಕ್ರಿಯಿಸಿ, ಬೇಡಿಕೆ ಮಂಡಿಸಲು ಅವರಿಗೆ ಸ್ವಾತಂತ್ರ್ಯವಿದೆ, ಆದರೆ ಸರ್ಕಾರ ಈ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಂಡು ಗೊಂದಲ ನಿವಾರಿಸಬೇಕು ಎಂದಿದ್ದಾರೆ.

ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಜಾರಕಿಹೊಳಿ, ಗೋಕಾಕ್ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬುದಕ್ಕೆ ತಮ್ಮ ಬೆಂಬಲವಿದೆ ಹಾಗೂ ಚಿಕ್ಕೋಡಿ ಭಾಗದ ವಿಚಾರದಲ್ಲಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಪಕ್ಷಗಳು ಬೇರೆ ಇದ್ದರೂ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರು ತಮ್ಮ ನಾಯಕರು ಎಂದ ಅವರು, ಹಿಂದುಳಿದ ವರ್ಗದ ನಾಯಕರನ್ನು ಮೂಲೆಗುಂಪು ಮಾಡಿದರೆ ಅದಕ್ಕೆ ಜನರೇ ತೀರ್ಮಾನ ಕೊಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾವಳಗಿ ಕಾರ್ಯಕ್ರಮದಲ್ಲಿ ಕತ್ತಿ ಕುಟುಂಬದ ಬಗ್ಗೆ ಆಡಿದ ಮಾತುಗಳ ಕುರಿತು ಸ್ಪಷ್ಟನೆ ನೀಡಿದ ಅವರು, ಆರಂಭಿಕ ಸುತ್ತುಗಳಲ್ಲಿ ತಮಗೆ ಹಿನ್ನಡೆಯಾಗುವುದು ಸಾಮಾನ್ಯವಾಗಿದ್ದು, ರಮೇಶ್ ಕತ್ತಿ ಮತ್ತು ಉಮೇಶ್ ಕತ್ತಿ ಜೊತೆಗಿನ ತಮ್ಮ ಮಾತು ಕೇವಲ ಹಾಸ್ಯ ಮಟ್ಟದ್ದು ಮಾತ್ರ ಎಂದು ತಿಳಿಸಿದ್ದಾರೆ.

ಇನ್ನು ಬೇಸಿಗೆಯಲ್ಲಿ ಚಿಕ್ಕೋಡಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾದಾಗ ಮಹಾರಾಷ್ಟ್ರದಿಂದ ನೀರು ಹರಿಸಲು ಸರ್ಕಾರ ಮುಂದಾದರೆ ಸಂಪೂರ್ಣ ಸಹಕಾರ ನೀಡುವುದಾಗಿ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ. 2028ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿದ್ದು ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ. ಸಹೋದರನ ಮನೆ ಮೇಲಿನ ಇಡಿ ಹಾಗೂ ಐಟಿ ದಾಳಿಗಳು ಸಾಮಾನ್ಯ ಎಂದಿರುವ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಸಭೆ ನಡೆಸಿ ಹಳೆಯ ಒಪ್ಪಂದಗಳನ್ನು ಪುನರ್‌ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Tags:

error: Content is protected !!