ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನೇರಿ ಸ್ವಾಮೀಜಿ ವಿರುದ್ಧದ ಆರೋಪ ಹಾಗೂ ಈ ಸಂಬಂಧ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲವೂ ಸರ್ಕಾರದ ಗಮನದಲ್ಲಿದೆ. ಗೃಹ ಸಚಿವರ ಗಮನಕ್ಕೂ ತರಲಾಗಿದೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ರವಿ ಹಂಜ್ ಕ್ಷಮೆಯಾಚನೆ ವಿಚಾರವಾಗಿ ಮಾತನಾಡಿದ ಅವರು, ವಿಡಿಯೋ ಕಾಲ್ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ ಅವರ ಕ್ಷಮೆಯಾಚನೆಯಿಂದ ತೃಪ್ತಿಯಾಗಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಒಂದು ಬಾರಿ ಕ್ಷಮೆಯಾಚಿಸಿ, ಮತ್ತೊಮ್ಮೆ ಬೇರೆ ರೀತಿಯ ಹೇಳಿಕೆ ನೀಡಿದ್ದಾನೆ. ಇದೀಗ ಕೊಚ್ಚಿಯಲ್ಲಿ ಬಂಧನವಾಗಿರುವುದು ಗಮನಾರ್ಹ ಎಂದರು. ಇದೇ ವೇಳೆ ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ತಮ್ಮ ಬಗ್ಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಶಂಕರ್ ಬಿದರಿ ಅವರು ನಮಗೆ ಬಹಳ ಆಪ್ತರು.
ಬಸವಣ್ಣನವರಿಗೆ ಅಪಮಾನ ಮಾಡಿದ್ದಕ್ಕೆ ನಾನು ಪ್ರತಿಕ್ರಿಯಿಸಿದ್ದೆ. ಅವರಿಗೆ ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ ಬಸವಣ್ಣನವರಿಗೆ ಆದ ಅಪಮಾನದ ಬಗ್ಗೆ ಅವರೂ ಯೋಚಿಸಬೇಕಲ್ಲವೇ ಎಂದು ಪ್ರಶ್ನಿಸಿದರು. ಇನ್ನೂ ಜಪಾನ್, ದಕ್ಷಿಣ ಕೊರಿಯಾಗೆ ಕೈಗಾರಿಕಾ ಅಧ್ಯಯನ ಪ್ರವಾಸಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು ರಾಜ್ಯದ ಕೈಗಾರಿಕಾ ಅಭಿವೃದ್ಧಿ ಹಾಗೂ ಬಂಡವಾಳ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಮುಖ್ಯಮಂತ್ರಿ ಹಾಗೂ ಸಚಿವರ ತಂಡ ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರವಾಸ ಕೈಗೊಳ್ಳಲಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದರು. ನಾಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ತಂಡ ಜಪಾನ್ನ ಟೋಕಿಯೋಗೆ ತೆರಳಲಿದೆ. ಅಲ್ಲಿ ಮೂಲಸೌಕರ್ಯಗಳ ವೀಕ್ಷಣೆ ನಡೆಸಲಾಗುವುದು. ಮುಖ್ಯಮಂತ್ರಿ ಓಸಾಕಾದಲ್ಲಿ ಟೊಯೋಟಾ ಕಂಪನಿಯ ಕಾರ್ಖಾನೆ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ವೀಕ್ಷಿಸಲಿದ್ದಾರೆ. ಅಲ್ಲಿನ ಕೈಗಾರಿಕೆಗಳು ಮತ್ತು ಮೂಲಸೌಕರ್ಯಗಳ ಅಧ್ಯಯನ ನಡೆಸಿದ ಬಳಿಕ ತಂಡದ ಪ್ರವಾಸ ಮುಂದುವರಿಯಲಿದೆ. ತಾವು ಟೋಕಿಯೋ ಬಳಿಕ ಓಸಾಕಾಗೆ ತೆರಳಿ ನಂತರ ದಕ್ಷಿಣ ಕೊರಿಯಾಗೆ ಭೇಟಿ ನೀಡಲಿರುವುದಾಗಿ ಹೇಳಿದರು. 2027ರ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಪೂರ್ವಸಿದ್ಧತೆಗಾಗಿ ಈ ಪ್ರವಾಸ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಾವೋಸ್ ಹಾಗೂ ಅಮೆರಿಕ ಪ್ರವಾಸವೂ ಇರಲಿದೆ. ಯುರೋಪಿಯನ್ ಯೂನಿಯನ್ ಒಪ್ಪಂದ ರಾಜ್ಯಕ್ಕೆ ಅನುಕೂಲವಾಗಲಿದೆ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿಡಲು ಹೊಸ ಕೈಗಾರಿಕಾ ನೀತಿಗಳನ್ನು ಜಾರಿಗೆ ತರಲಾಗಿದೆ ಎಂದರು.
ಸ್ಟಾರ್ಟ್ಅಪ್, ಮೆಷಿನ್ ಟೂಲ್ಸ್, ಐಟಿ-ಬಿಟಿ ಹಾಗೂ ಏರೋಸ್ಪೇಸ್ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕದ ಪಾಲು ಶೇ.65ರಷ್ಟಿದ್ದು, ಅದನ್ನು ಶೇ.75ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯದ ಪ್ರಗತಿ ಮುಂದುವರಿಯುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಕರ್ನಾಟಕವನ್ನು ದೇಶದ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಮುಂಚೂಣಿಗೆ ತರಲು ಪ್ರಯತ್ನಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
