ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಸಿದ್ದಸಿರಿ ಮಲ್ಟಿಸ್ಟೇಟ್ ಸೊಸೈಟಿ ವಿರುದ್ಧ ಸಹಕಾರಿ ಮುಖಂಡ ರಮೇಶ ಬಿದನೂರ ಗಂಭೀರ ಆರೋಪ ಮಾಡಿದ್ದಾರೆ. ಸಾಲ ವಿತರಣೆ, ಹೂಡಿಕೆ, ಗ್ರಾಚ್ಯುಟಿ ನಿಧಿ ಹಾಗೂ ದ್ರವ್ಯ ಆಸ್ತಿ ನಿರ್ವಹಣೆಯಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿ ಎಸ್ಐಟಿ ತನಿಖೆಯ ವಿಚಾರ ಪ್ರಸ್ತಾಪಿಸಿ ದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದಸಿರಿ ಸಂಸ್ಥೆಯ ಕಾನೂನು ಸಲಹೆಗಾರ ಸತೀಶ್ಚಂದ್ರ ಕುಲಕರ್ಣಿ, ಆರೋಪಗಳನ್ನು ತಳ್ಳಿಹಾಕಿ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಬ್ಬರ ಆರೋಪ–ಪ್ರತ್ಯಾರೋಪದ ವಾಕ್ಸಮರದ ವರದಿ ಇಲ್ಲಿದೆ.
ಹೌದು… ಸಿದ್ದಸಿರಿ ಮಲ್ಟಿಸ್ಟೇಟ್ ಸೊಸೈಟಿಯ ಹಣಕಾಸು ವ್ಯವಹಾರಗಳ ಕುರಿತು ಸಹಕಾರಿ ಮುಖಂಡ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಬಿದನೂರ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 2026ರ ನವೆಂಬರ್ 2ರಂದು ಕೇಂದ್ರ ಸಹಕಾರ ಸಂಘಗಳ ನಿಬಂಧಕರು ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ನವೆಂಬರ್ 5ರಂದು ರಾಜ್ಯ ಸಹಕಾರ ಸಂಘಗಳ ನಿಬಂಧಕರು ತನಿಖಾ ತಂಡ ರಚಿಸಿದ್ದಾರೆ. ಬೆಳಗಾವಿ ಪ್ರಾಂತ್ಯದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರ ನೇತೃತ್ವದಲ್ಲಿ ರಚನೆಯಾದ ತಂಡಕ್ಕೆ 20 ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಬಿದನೂರ ತಿಳಿಸಿದ್ದಾರೆ. ಸೊಸೈಟಿಯಿಂದ ವಿವಿಧ ಸಂಸ್ಥೆಗಳಿಗೆ 174 ಕೋಟಿ 50 ಲಕ್ಷ ರೂ.ಗೂ ಅಧಿಕ ಸಾಲ ವಿತರಣೆ, 75 ಕೋಟಿ ರೂ. ಭದ್ರತೆಗೆ 300 ಕೋಟಿ ರೂ. ಸಾಲ ನೀಡಿರುವ ಆರೋಪ, ಗ್ರಾಚ್ಯುಟಿ ನಿಧಿ ನಿರ್ವಹಣೆ, ದ್ರವ್ಯ ಆಸ್ತಿ ಕೊರತೆ, ಚಿಂಚೋಳಿ ಯೋಜನೆಯಲ್ಲಿನ ಹೂಡಿಕೆ ಸೇರಿದಂತೆ ಹಲವು ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಅಧಿಕಾರಿಗಳು ದಾಖಲೆಗಳನ್ನು ಕೇಳಿದ್ದಾರೆ. ತಮ್ಮ ಬಳಿ ಇನ್ನಷ್ಟು ದಾಖಲೆಗಳಿದ್ದು, ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.
ಇನ್ನು ರಮೇಶ ಬಿದನೂರ ಅವರ ಆರೋಪಗಳಿಗೆ ಸಿದ್ದಸಿರಿ ಸಂಸ್ಥೆಯ ಕಾನೂನು ಸಲಹೆಗಾರ ಸತೀಶ್ಚಂದ್ರ ಕುಲಕರ್ಣಿ ತಿರುಗೇಟು ನೀಡಿದ್ದಾರೆ. ಸಂಸ್ಥೆಗೆ ನೀಡಲಾಗಿದ್ದ ತನಿಖಾ ನೋಟಿಸ್ನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ನವೆಂಬರ್ 12ರಂದು ಮೊದಲ ವಿಚಾರಣೆಯಲ್ಲಿಯೇ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ಸದ್ಯ ನೋಟಿಸ್ ಆಧಾರಿತ ತನಿಖಾ ಪ್ರಕ್ರಿಯೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ಸಿದ್ದಸಿರಿ ಸಂಸ್ಥೆಯ ಒಟ್ಟು ಠೇವಣಿ 6,319 ಕೋಟಿ ರೂಪಾಯಿಗಳಿದ್ದು, ಠೇವಣಿದಾರರ ಹಣ ಸಂಪೂರ್ಣ ಸುರಕ್ಷಿತವಾಗಿದೆ. ಸಂಸ್ಥೆಯ ವಿರುದ್ಧ ಯಾವುದೇ ಆರೋಪಗಳಿದ್ದರೂ ಕಾನೂನುಬದ್ಧವಾಗಿ ಉತ್ತರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಸಂಸ್ಥೆಯ ನಿರ್ದೇಶಕರು ಕೂಡ ಬಿದನೂರ ಅವರ ಆರೋಪಗಳನ್ನು ತಳ್ಳಿಹಾಕಿ, ಸಂಸ್ಥೆಯ ಆಡಳಿತ ಮತ್ತು ಹಣಕಾಸು ವ್ಯವಹಾರಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಸಿದ್ದಸಿರಿ ಸೊಸೈಟಿ ವಿರುದ್ಧ ರಮೇಶ ಬಿದನೂರ ಮಾಡಿರುವ ಆರೋಪಗಳು ಮತ್ತು ಅದಕ್ಕೆ ಸಂಸ್ಥೆಯ ಕಾನೂನು ಸಲಹೆಗಾರರು ನೀಡಿರುವ ತಿರುಗೇಟು ಇದೀಗ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ತನಿಖೆಯಾಗಬೇಕು ಎಂಬ ಆಗ್ರಹ, ಮತ್ತೊಂದೆಡೆ ನ್ಯಾಯಾಲಯದ ತಡೆಯಾಜ್ಞೆಯ ಸಮರ್ಥನೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಯಾವ ತಿರುವು ಪಡೆದುಕೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್
ವಿಜಯಪುರ.
