ಟಾಟಾ ಸೋಮೋ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ವಿದ್ಯುತ್ ಪ್ರತಿನಿಧಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ರಾಯಬಾಗ ತಾಲೂಕಿನ ಯಡ್ರಾಂವ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಮೂಲದವರಾಗಿದ್ದು, ಸದ್ಯ ಅಂಕಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ಮಹೇಶ್ ಗೊಡ್ಡಾಳೆ (೪೪) ಎಂದು ಗುರುತಿಸಲಾಗಿದೆ.ಮಹೇಶ್ ಗೊಡ್ಡಾಳೆ ಅವರು ಚಿಕ್ಕೋಡಿ ತಾಲೂಕಿನ ಯಡೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ವಿದ್ಯುತ್ ಬಿಲ್ (ಲೈಟ್ ಬಿಲ್) ಕಲೆಕ್ಷನ್ ಮಾಡುವ ಜನಸ್ನೇಹಿ ಗ್ರಾಮ ವಿದ್ಯುತ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಅವರ ಖಾಸಗಿ ಕೆಲಸ ನಿಮಿತ್ಯ ಹೋಗುವಾಗ ರಾತ್ರಿ ರಾಯಬಾಗ ತಾಲೂಕಿನ ಯಡ್ರಾಂವ ರಸ್ತೆಯಲ್ಲಿ ಟಾಟಾ ಸೋಮೋ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಮಹೇಶ್ ಗೊಡ್ಡಾಳೆ ಅವರಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ನಡೆಸಿದ ಹಠಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯೊಸಿರೆಳೆದಿದ್ದಾರೆ.
ಮೃತ ಮಹೇಶ್ ಅವರು ಇಬ್ಬರು ಗಂಡು ಮಕ್ಕಳು, ಪತ್ನಿ ಹಾಗೂ ವಯಸ್ಸಾದ ತಂದೆಯನ್ನು ಅಗಲಿದ್ದಾರೆ. ಮನೆಯ ಆಧಾರಸ್ತಂಭವಾಗಿದ್ದ ವ್ಯಕ್ತಿಯ ಅಕಾಲಿಕ ನಿಧನದ ಸುದ್ದಿ ತಿಳಿದು ಕುಟುಂಬಸ್ಥರು, ಬಂಧು-ಮಿತ್ರರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕವ್ಯಕ್ತವಾಗಿದೆ.
ಈ ಘಟನೆಯು ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
