ಬೆಳಗಾವಿ ನಗರದಲ್ಲಿ ಸಲೂನ್ ಹಾಗೂ ಸ್ಪಾ ಮರೆ ಅಡಗಿದ್ದ ಅನೈತಿಕ ಚಟುವಟಿಕೆಯ ದೊಡ್ಡ ಜಾಲವೊಂದು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ಆರ್ಪಿಡಿ ಕ್ರಾಸ್ ಬಳಿ ಇರುವ ಡಿವೈನ್ ಸಲೂನ್ ಆ್ಯಂಡ್ ಸ್ಪಾ ಮೇಲೆ ದಾಳಿ ನಡೆಸಿರುವ ಪೊಲೀಸರು, ಅಂತರರಾಜ್ಯದ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದು, ಮಾಲೀಕ ಹಾಗೂ ಮ್ಯಾನೇಜರ್ ಅನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ನಗರದ ಆರ್ಪಿಡಿ ಕ್ರಾಸ್ನಲ್ಲಿರುವ ‘ಡಿವೈನ್ ಸಲೂನ್ ಆ್ಯಂಡ್ ಸ್ಪಾ’ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ, ಸಲೂನ್ ಮತ್ತು ಸ್ಪಾ ಹೆಸರಿನಲ್ಲಿ ಯುವತಿಯರನ್ನು ಇಟ್ಟುಕೊಂಡು ರಹಸ್ಯವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕೃತ್ಯವನ್ನು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪಿಐ ಮಂಜುನಾಥ ನಾಯಕ ನೇತೃತ್ವದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದೆ.
ದಾಳಿಯ ವೇಳೆ ಗುಜರಾತ್ ಹಾಗೂ ಮುಂಬೈ ಮೂಲದವರು ಸೇರಿದಂತೆ ಹೊರರಾಜ್ಯದ ನಾಲ್ವರು ಯುವತಿಯರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸ್ಪಾ ಮಾಲೀಕ ಹಾಗೂ ಮ್ಯಾನೇಜರ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಮುಂದಿನ ತನಿಖೆ ಹಾಗೂ ಕಾನೂನು ಕ್ರಮಕ್ಕಾಗಿ ಆರೋಪಿಗಳು ಮತ್ತು ಪ್ರಕರಣದ ದಾಖಲೆಗಳನ್ನು ಟಿಳಕವಾಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
