Chikkodi

ಚುನ್ನಪ್ಪ ಪೂಜೇರಿ, ಶಶಿಕಾಂತ್ ಗುರೂಜಿ ಅವರ ಬೆಂಬಲಿಗರಿಂದ ನನಗೆ ಬೆದರಿಕೆ:ಮಹಾಂತೇಶ ಜಮಾದಾರ ಆರೋಪ

Share

ಕಬ್ಬು ಬೆಳೆಗಾರರ ಹೋರಾಟದ ದಿಕ್ಕು ತಪ್ಪಿಸಿ, ₹3,600 ದರಕ್ಕೆ ಒಪ್ಪಿಕೊಳ್ಳುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಕಲಬುರಗಿ ಮೂಲದ ರೈತ ಮುಖಂಡ ಮಹಾಂತೇಶ ಜಮಾದಾರ ಅವರು ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಡಿಯೋ ಹೇಳಿಕೆಯ ಮೂಲಕ ತಮ್ಮ ಆಕ್ರೋಶ ಹೊರಹಾಕಿರುವ ಅವರು, ರೈತರನ್ನು ಎರಡು ತಿಂಗಳುಗಳ ಕಾಲ ಹೋರಾಟಕ್ಕೆ ಬಳಸಿಕೊಂಡು, ಗುರ್ಲಾಪುರದಲ್ಲಿ ಹಣ ವಸೂಲಿ ಮಾಡಿ ರಾತ್ರೋರಾತ್ರಿ ₹3,600 ದರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಇಬ್ಬರು ಮುಖಂಡರು ₹3,600ಕ್ಕೆ ಒಪ್ಪದೇ ಇದ್ದಿದ್ದರೆ ಮುದೋಳ ಹಾಗೂ ಇಡೀ ರಾಜ್ಯದ ಕಬ್ಬು ಬೆಳೆಗಾರರಿಗೆ ಟನ್‌ಗೆ ₹4,000ಕ್ಕೂ ಅಧಿಕ ದರ ಸಿಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 20 ವರ್ಷಗಳಿಂದ ರೈತರಿಗಾಗಿ ಹೋರಾಡುತ್ತಿರುವ ಮುದೋಳದ ಹಿರಿಯ ಹೋರಾಟಗಾರ ರಮೇಶ್ ಗಡದನ್ನವರ ಅವರ ಸಂಗೊಳ್ಳಿ ರಾಯಣ್ಣ ವೇದಿಕೆಯ ನಿರಂತರ ಹೋರಾಟದ ಫಲವಾಗಿ ಇಂದು ಮುದೋಳ ಹಾಗೂ ಬಾಗಲಕೋಟೆ ಭಾಗದ ರೈತರಿಗೆ ₹3,800 ದರ ಸಿಗುವಂತಾಗಿದೆ. ಹಗಲು-ರಾತ್ರಿ ಎನ್ನದೆ ಹೋರಾಟ ನಡೆಸಿ ಜಯ ತಂದುಕೊಟ್ಟ ಮುದೋಳ ಮತ್ತು ಬಾಗಲಕೋಟೆಯ ಸಮಸ್ತ ರೈತ ಬಾಂಧವರಿಗೆ ಇಡೀ ಕರ್ನಾಟಕದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ,” ಎಂದು ಮಹಾಂತೇಶ ಜಮಾದಾರ ಹೇಳಿದ್ದಾರೆ.

ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ಅವರ ಬೆಂಬಲಿಗರು ನನಗೆ ಫೋನ್ ಮಾಡಿ ಬೆದರಿಕೆ ಹಾಕುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯವಾಗಿ ಕಮೆಂಟ್ ಮಾಡುವುದನ್ನು ಮಾಡುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಮೊದಲು ರೈತರಿಗೆ ಮಾಡಿದ ಅನ್ಯಾಯಕ್ಕೆ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡುವ ಇವರು, ಹಿರಿಯ ಹೋರಾಟಗಾರರ ವೇದಿಕೆಯನ್ನು ಟೀಕಿಸುವ ನೈತಿಕತೆ ಹೊಂದಿಲ್ಲ. ಇನ್ನು ಮುಂದೆ ಮುದೋಳದ ರೈತ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!