Vijaypura

ಆಲಮಟ್ಟಿ ಜಲಾಶಯದ ನೀರಿನ ಸತ್ಯ ಬಯಲಾಗಲಿ; ನ.23ಕ್ಕೆ ಮಹತ್ವದ ಸಭೆ!

Share

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬರಗಾಲ ತಾಂಡವವಾಡುತ್ತಿದೆ. ಕೃಷಿಗೆ ನೀರಿಲ್ಲ, ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯದ ನೀರನ್ನು ನಾರಾಯಣಪುರದ ಮೂಲಕ ತೆಲಂಗಾಣಕ್ಕೆ ಹರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತ ಸಂಘಟನೆ ಗಳು, ಜಲಾಶಯದ ನೀರಿನ ನೈಜ ಸ್ಥಿತಿಗತಿ ಬಹಿರಂಗ ಪಡಿಸುವಂತೆ ಆಗ್ರಹಿಸಿವೆ. ಈ ಸಂಬಂಧ ನವೆಂಬರ್ 23ರಂದು ವಿಜಯಪುರದಲ್ಲಿ ಮಹತ್ವದ ಸಭೆ ಕರೆದಿದ್ದು, ಸಚಿವರು, ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಿವೆ. ಈ ಕುರಿತು ಇಲ್ಲಿದೆ ಒಂದು ವಿಶೇಷ ವರದಿ…

ಬರದ ಹೊಡೆತಕ್ಕೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಮಳೆಯಿಲ್ಲದೆ ಬೆಳೆಗಳು ಒಣ ಗುತ್ತಿವೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸು ವುದೂ ಸವಾಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯದ ನೀರಿನ ಬಳಕೆ ಕುರಿತು ರೈತ ಸಂಘಟನೆಗಳು ಪ್ರಶ್ನೆ ಎತ್ತಿವೆ. ಆಲಮಟ್ಟಿ ಜಲಾಶಯ ದಿಂದ ನದಿ ಪಾತ್ರದ ಮೂಲಕ ಹಾಗೂ ಕೆಪಿಸಿಎಲ್ ಮೂಲಕ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿಸಿ, ಅಲ್ಲಿಂದ ತೆಲಂಗಾಣಕ್ಕೆ ನೀರು ನೀಡಲಾಗಿದೆ ಎಂಬುದು ರೈತರ ಆರೋಪ. ರಾಜ್ಯ ಸರ್ಕಾರ ಜಲಾಶಯದಲ್ಲಿದ್ದ ನೀರನ್ನು ಖಾಲಿ ಮಾಡಿದೆ. ಆದರೆ ನೈಜ ಸ್ಥಿತಿಯನ್ನು ಜನರ ಮುಂದೆ ಹೇಳುತ್ತಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನವೆಂಬರ್ 17ರ ಬೆಳಿಗ್ಗೆ 8 ಗಂಟೆಯ ಜಲಾಶಯದ ಸ್ಥಿತಿಗತಿ ವರದಿಯ ಪ್ರಕಾರ, ಆಲಮಟ್ಟಿಯಲ್ಲಿ 513.84 ಮೀಟರ್ ನೀರಿನ ಮಟ್ಟವಿದ್ದು, ಒಟ್ಟು ಸಂಗ್ರಹ 53.476 ಟಿಎಂಸಿ ಹಾಗೂ ಲೈವ್ ಸ್ಟೋರೇಜ್ 35.856 ಟಿಎಂಸಿ ಇದೆ. ಒಳಹರಿವು ಶೂನ್ಯ ಕ್ಯೂಸೆಕ್ ಇದ್ದರೆ, ಒಟ್ಟು ಹೊರಹರಿವು 868 ಕ್ಯೂಸೆಕ್ ದಾಖಲಾಗಿದೆ. ಇದರಲ್ಲಿ ಕೆಪಿಸಿಎಲ್ ಮೂಲಕ 150 ಕ್ಯೂಸೆಕ್ ಹಾಗೂ ಆವಿಯಾಗುವಿಕೆ, ಕುಡಿಯುವ ನೀರು, ಎನ್‌ಟಿಪಿಸಿ ಮತ್ತು ಇತರೆ ಲಿಫ್ಟ್‌ಗಳಿಗೆ 618 ಕ್ಯೂಸೆಕ್ ನೀರು ಬಳಕೆಯಾಗುತ್ತಿದೆ.

ಇನ್ನಯ ಈ ಹಿನ್ನೆಲೆಯಲ್ಲಿ ಅಖಂಡ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ನವೆಂಬರ್ 23ರಂದು ಬೆಳಿಗ್ಗೆ 11 ಗಂಟೆಗೆ ವಿಜಯಪುರದ ಐಬಿಯಲ್ಲಿ ಸಭೆ ಆಯೋಜಿಸಿವೆ.
ವಿಜಯಪುರ ಹಾಗೂ ಬಾಗಲ ಕೋಟ ಅವಳಿ ಜಿಲ್ಲೆಗಳ ಉಸ್ತುವಾರಿ ಸಚಿವರು, ಎಲ್ಲಾ ಶಾಸಕರು ಹಾಗೂ ಸಂಸದರು ಸಭೆಗೆ ತಪ್ಪದೇ ಆಗಮಿಸಬೇಕು. ಆಲಮಟ್ಟಿ ಜಲಾಶಯದ ನೀರಿನ ನೈಜ ಸ್ಥಿತಿಗತಿ, ನಾರಾಯಣಪುರಕ್ಕೆ ನೀರು ಹರಿಸಿರುವ ವಿಚಾರ ಹಾಗೂ ತೆಲಂಗಾಣಕ್ಕೆ ನೀರು ನೀಡಿರುವ ಆರೋಪದ ಕುರಿತು ರೈತರಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿವೆ. ಈ ಕುರಿತು ಅರವಿಂದ್ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಅಖಂಡ ಕರ್ನಾಟಕ ರೈತ ಸಂಘ ಹಾಗೂ ವಿಠ್ಠಲ್ ಬಿರಾದಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ, ಬರದ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಆಲಮಟ್ಟಿ ಜಲಾಶಯದ ನೀರಿನ ನಿರ್ವಹಣೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ನೀರು ಎಲ್ಲಿಗೆ ಹರಿಯಿತು? ರೈತರ ಹಿತ ಕಾಯಲು ಸರ್ಕಾರದ ಮುಂದಿನ ಕ್ರಮವೇನು? ಎಂಬ ಪ್ರಶ್ನೆಗಳಿಗೆ ನವೆಂಬರ್ 23ರ ಸಭೆಯಲ್ಲಿ ಉತ್ತರ ಸಿಗಲಿದೆಯೇ?
ಈಗಾಗಲೇ ರೊಚ್ಚಿಗೆದ್ದಿರುವ ರೈತರ ಸಮಸ್ಯೆ ಪರಿಹರಿಸಲು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!