BELAGAVI

ಮನುಸ್ಮೃತಿ ಅಂಶಗಳು ಸಂವಿಧಾನದಲ್ಲಿವೆ ಎಂಬ ಹೇಳಿಕೆಗೆ ದಲಿತ ಮುಖಂಡರ ತೀವ್ರ ಆಕ್ಷೇಪ

Share

ಭಾರತೀಯ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ದಲಿತ ಮುಖಂಡರು, ಸಂವಿಧಾನದಲ್ಲಿ ಮನುಸ್ಮೃತಿಯ ಒಂದೇ ಒಂದು ಅಂಶವಿದ್ದರೂ ಬಹಿರಂಗವಾಗಿ ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.

ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ದಲಿತ ಮುಖಂಡರಾದ ಸಂಜು ಕಂಬಾಗಿ, ಪರಶುರಾಮ ಪಡಗಾರ ಹಾಗೂ ಯಮನಪ್ಪ ಸಿದರಡ್ಡಿ ಅವರು, ಮನುಸ್ಮೃತಿಯಲ್ಲಿದ್ದ ವರ್ಣಾಶ್ರಮ ವ್ಯವಸ್ಥೆ ಹಾಗೂ ಅಸಮಾನತೆಯ ಪದ್ಧತಿಗಳನ್ನು ಪ್ರಸ್ತಾಪಿಸಿ, ಭಾರತೀಯ ಸಂವಿಧಾನವು ಎಲ್ಲರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಿದೆ ಎಂದು ಹೇಳಿದರು. ಇದೇ ವೇಳೆ ಕನ್ನೇರಿ ಮಠದ ಸ್ವಾಮೀಜಿಗಳ ಹೇಳಿಕೆಗಳನ್ನು ಸಮರ್ಥಿಸಿಕೊಂಡಿರುವವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳುವವರು ಯಾವ ಅಂಶಗಳಿವೆ ಎಂಬುದನ್ನು ಬಹಿರಂಗವಾಗಿ ತೋರಿಸಬೇಕು. ಈ ಕುರಿತು ಮುಕ್ತ ವೇದಿಕೆಯಲ್ಲಿ ಸಂವಾದ ನಡೆಸಲು ಸಿದ್ಧರಿದ್ದೇವೆ. ಸಂವಿಧಾನದಲ್ಲಿ ಅಂತಹ ಅಂಶಗಳಿವೆ ಎಂದು ಸಾಬೀತುಪಡಿಸಿದರೆ ಒಪ್ಪಿಕೊಳ್ಳಲಿ; ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಇಂತಹ ಹೇಳಿಕೆಗಳು ಹಾಗೂ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಮುಂದುವರಿಸಿದರೆ ದಲಿತ ಸಂಘರ್ಷ ಸಮಿತಿಯಿಂದ ಕೊಲ್ಲಾಪುರದ ಕನ್ನೇರಿ ಮಠಕ್ಕೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭಾರತೀಯ ಸಂವಿಧಾನವು ಜಾತಿ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಸಮಾನತೆ ಮತ್ತು ನ್ಯಾಯವನ್ನು ನೀಡಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆಶಯವನ್ನು ಎತ್ತಿಹಿಡಿದಿರುವ ಸಂವಿಧಾನದ ಮಹತ್ವವನ್ನು ಅರಿತು ಮಾತನಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.

Tags:

error: Content is protected !!