ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ಶರಣರ ವಚನಗಳಿಗೆ ಅವಮಾನಿಸಿರುವ ಅನಿವಾಸಿ ಭಾರತೀಯ, ದಾವಣಗೆರೆ ಮೂಲದ ಲೇಖಕ ರವಿ ಹಂಜಗಿಮಠ ಮತ್ತು ಖಾಸಗಿ ವಾಹಿನಿಯ ಸಂಪಾದಕರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಗುಡಸಿ ಒತ್ತಾಯಿಸಿದರು.
ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವ ಮಂಟಪ ಕೃತಿಯ ಕರ್ತೃ ರವಿ ಹಂಜಗಿಮಠ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಸವಣ್ಣನವರನ್ನು ಕೀಳು ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಲಿಂಗಾಯತರನ್ನು ‘ಲಿಂಗಹತ’ ಎಂದು ಅವಹೇಳನಕಾರಿಯಾಗಿ ನಮೂದಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಶರಣರ ವಚನಗಳನ್ನು ತಿರುಚುವ ಮೂಲಕ ಸಮಾಜದ ಜನರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಚಿಕ್ಕೋಡಿ ಘಟಕದ ಪದಾಧಿಕಾರಿಗಳಿಂದ ಈಗಾಗಲೇ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಪೊಲೀಸರು ತಕ್ಷಣವೇ ಎಫ್ಐಆರ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಬಸವರಾಜ ಮಂಟೂರೆ, ಪದಾಧಿಕಾರಿಗಳಾದ ಪುಂಡಲೀಕ ಚೌಗಲಾ, ಮಹಾಲಿಂಗಪ್ಪ ಮನಗೂಳಿ, ಬಾಳಪ್ಪ ತೇಲಿ, ಬಸವಪ್ರಭು ಅರಬಾವಿ, ವಿಜಯಕುಮಾರ ಗುಡಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
