ಬೆಳಗಾವಿ ಗಡಿ ವಿಚಾರ, ನೆಲ-ಜಲ-ಭಾಷೆಯ ರಕ್ಷಣೆ ಹಾಗೂ ಮುಂಬರುವ ಸುವರ್ಣ ಸೌಧ ಅಧಿವೇಶನದ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ಗಡಿ ವಿಚಾರದಲ್ಲಿ ಯಾರಿಂದಲೂ ಬದಲಾವಣೆ ಅಸಾಧ್ಯ ಎಂದಿರುವ ಅವರು, ಅಧಿವೇಶನವು ಕೇವಲ ಪ್ರತಿಭಟನೆಗೆ ಸೀಮಿತವಾಗದೆ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಬೇಕು ಎಂದು ಆಶಿಸಿದ್ದಾರೆ.
ಬೆಳಗಾವಿ ಗಡಿ ವಿವಾದ ಹಾಗೂ ರಾಜ್ಯದ ನೆಲ-ಜಲ-ಭಾಷೆಯ ಹಕ್ಕುಗಳ ಕುರಿತು ಸಚಿವ ಎಚ್.ಕೆ. ಪಾಟೀಲ್ ದೃಢ ನಿಲುವು ವ್ಯಕ್ತಪಡಿಸಿದ್ದಾರೆ. ಮಹಾಜನ ವರದಿ ಇಲ್ಲವೇ ಯಥಾಸ್ಥಿತಿ ಎಂಬುದೇ ಕನ್ನಡಿಗರ ಅಂತಿಮ ನಿರ್ಣಯವಾಗಿದ್ದು, ಇದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಗಡಿ ಕನ್ನಡಿಗರ ಪರ ನಿಂತ ಹೋರಾಟಗಾರರನ್ನು ಅಭಿನಂದಿಸಿದ್ದಾರೆ. ಜಲ ವಿಚಾರದಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಜಾಗೃತ ಮನಸ್ಸುಗಳು ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೆ, ಕನ್ನಡ ಭಾಷೆಗಾಗುತ್ತಿರುವ ಹಿನ್ನಡೆ ಕುರಿತು ಸುವರ್ಣ ಸೌಧದಲ್ಲಿ ಶಾಸಕರಿಗಾಗಿ ವಿಶೇಷ ಕಮ್ಮಟ ಆಯೋಜಿಸುವಂತೆ ಒತ್ತಾಯಿಸಿರುವ ಸಚಿವರು, ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದಂದು ಗಾಂಧಿ ಪ್ರತಿಮೆ ಸ್ಥಾಪಿಸಿದ ಮಾದರಿಯಲ್ಲೇ, ಸುವರ್ಣ ಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ಪುತ್ತಳಿಯನ್ನು ಅನಾವರಣಗೊಳಿಸಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸೋಣ ಎಂದಿದ್ದಾರೆ.
ಇದೇ ವೇಳೆ, ಬೆಳಗಾವಿ ಅಧಿವೇಶನದ ಆಶಯ ಮತ್ತು ಬಸವಣ್ಣನವರ ಕುರಿತ ಪುಸ್ತಕ ವಿವಾದದ ಬಗ್ಗೆಯೂ ಎಚ್.ಕೆ. ಪಾಟೀಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿ ಅಧಿವೇಶನವು ಕೇವಲ ಪ್ರದರ್ಶನಕ್ಕೋ ಅಥವಾ ಹೊರಗಿನ ಪ್ರತಿಭಟನಾ ಟೆಂಟ್ಗಳಿಗೋ ಸೀಮಿತವಾಗಬಾರದು; ಬದಲಾಗಿ ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹತ್ವದ ವೇದಿಕೆಯಾಗಬೇಕು ಎಂದು ಆಶಿಸಿದ್ದಾರೆ. ಇನ್ನು ಬಸವಣ್ಣನವರ ಕುರಿತ ವಿವಾದಾತ್ಮಕ ಪುಸ್ತಕ ಹಾಗೂ ಅದರ ಅಪ್ರಬುದ್ಧ ವ್ಯಾಖ್ಯಾನವನ್ನು ತೀವ್ರವಾಗಿ ಖಂಡಿಸಿರುವ ಸಚಿವರು, ನಮ್ಮ ಸರ್ಕಾರ ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ನನ್ನಾಗಿ ಘೋಷಿಸಿದೆ. ಸಂವಿಧಾನದಷ್ಟೇ ಪವಿತ್ರವಾದ ಬಸವಣ್ಣನವರ ತತ್ವ, ಸಿದ್ಧಾಂತ ಮತ್ತು ಅನುಭವ ಮಂಟಪದ ಸಂದೇಶಗಳು ಇಡೀ ಜಗತ್ತಿಗೆ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದ್ದಾರೆ.
