ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಸ್ಗಳಲ್ಲಿ ಮಹಿಳೆಯರದ್ದೇ ದರ್ಬಾರ್ ನಡೀತಿದೆ. ಆದ್ರೆ ಪಾಪ ಪುರುಷ ಪ್ರಯಾಣಿಕರು ಮಾತ್ರ ಬಸ್ ಹತ್ತೋಕೂ ಆಗದೆ, ಫುಟ್ಬೋರ್ಡ್ ಮೇಲೆ ನಿಲ್ಲೋಕೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹೀಗಾಗಿ ನಮಗೂ ಸಪರೇಟ್ ಬಸ್ ಬಿಡಿ ಸ್ವಾಮಿ ಅಂತ ಬೆಳಗಾವಿಯ ಬೈಲಹೊಂಗಲದಲ್ಲಿ ಪುರುಷರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಇಂದು ವಿಶೇಷ ಹಾಗೂ ಗಮನಸೆಳೆಯುವ ಪ್ರತಿಭಟನೆಯೊಂದು ನಡೆಯಿತು. ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್ ಬಡಿಗೇರ್ ಅವರ ನೇತೃತ್ವದಲ್ಲಿ ಜಮಾಯಿಸಿದ ಪುರುಷರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಳಲನ್ನು ತೋಡಿಕೊಂಡರು. ಶಕ್ತಿ ಯೋಜನೆಯ ಎಫೆಕ್ಟ್ನಿಂದ ಎಲ್ಲಾ ಬಸ್ಗಳು ಸದಾ ಫುಲ್ ಆಗುತ್ತಿದ್ದು, ಟಿಕೆಟ್ ತಗೊಂಡು ಪ್ರಯಾಣಿಸುವ ಪುರುಷರಿಗೆ ಸೀಟು ಸಿಗುವುದೇ ದೊಡ್ಡ ಸಾಹಸವಾಗಿದೆ. ಹೀಗಾಗಿ ಪುರುಷ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ತಕ್ಷಣವೇ ಪ್ರತ್ಯೇಕ ಬಸ್ಗಳನ್ನು ಓಡಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಇದೇ ವೇಳೆ, ದಿನೇ ದಿನೇ ಏರುತ್ತಿರುವ ಬೆಲೆ ಏರಿಕೆಯ ಬಿಸಿಯ ಬಗ್ಗೆಯೂ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಬಸ್ಸಲ್ಲಿ ಜಾಗವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಪ್ರತಿಭಟನೆಯ ಬಳಿಕ ಬೈಲಹೊಂಗಲ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದ್ದು, ಪುರುಷರ ಈ ಬೇಡಿಕೆಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
