Bailahongala

ಬೈಲಹೊಂಗಲದಲ್ಲಿ ಭುಗಿಲೆದ್ದ ರೈತನ್ನನ ಆಕ್ರೋಶ: ಕಬ್ಬಿಗೆ 5,500 ರೂ. ಬೆಂಬಲ ಬೆಲೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ!

Share

ಕಬ್ಬಿಗೆ ಸೂಕ್ತ ದರ ಹಾಗೂ ಬೆಳೆಗಳಿಗೆ ಎಂಎಸ್‌ಪಿ (MSP) ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ರೈತರ ಬೃಹತ್ ಪ್ರತಿಭಟನೆ 6ನೇ ದಿನಕ್ಕೂ ಮುಂದುವರಿದಿದೆ. ರಾಣಿ ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿರುವ ನೂರಾರು ರೈತರು, ತಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಪ್ರಮುಖ ಕೇಂದ್ರವಾದ ರಾಣಿ ಚೆನ್ನಮ್ಮ ವೃತ್ತದಲ್ಲಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಅನ್ನದಾತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದಿರುವುದನ್ನು ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರೈತ ಸಂಘಟನೆಗಳ ನಾಯಕರು ಮತ್ತು ಸ್ಥಳೀಯ ಕೃಷಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಸರ್ಕಾರದ ಜನವಿರೋಧಿ ಹಾಗೂ ರೈತವಿರೋಧಿ ನೀತಿಗಳ ವಿರುದ್ಧ ನಿರಂತರ ಘೋಷಣೆಗಳು ಮೊಳಗುತ್ತಿದ್ದು, ಪಟ್ಟಣದಲ್ಲಿ ಹೋರಾಟದ ಬಿಸಿ ಹೆಚ್ಚಾಗಿದೆ.

ವಿಶೇಷವಾಗಿ ಕಬ್ಬಿಗೆ ಪ್ರತಿ ಟನ್‌ಗೆ 5,500 ರೂಪಾಯಿ ಬೆಲೆ ನಿಗದಿಪಡಿಸಬೇಕು ಹಾಗೂ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ತಕ್ಷಣವೇ ಹೆಚ್ಚಿಸಬೇಕು ಎಂಬುದು ರೈತರ ಮುಖ್ಯ ಬೇಡಿಕೆಯಾಗಿದೆ. ವರ್ಷಗಳಿಂದ ಸರ್ಕಾರಗಳು ನೀಡುತ್ತಿರುವ ಸಾಂತ್ವನದ ಭರವಸೆಗಳಿಂದ ರೈತರ ಸಂಕಷ್ಟ ತೀರದೇ ಉಳಿದಿದ್ದು, ಸಂಪೂರ್ಣ ಪರಿಹಾರ ಸಿಗುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ರೈತ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಸರ್ಕಾರಗಳು ತಕ್ಷಣವೇ ಗಮನಹರಿಸಿ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾ ನಿರತ ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!