ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದಲ್ಲಿ ಸಾರ್ವಜನಿಕರು ಹಾಗೂ ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಕೊರತೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಸಾಕಷ್ಟು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಬಸ್ ನಿಲ್ದಾಣ ಇದೀಗ ಸಂಪೂರ್ಣವಾಗಿ ಹಾಳಾಗಿದ್ದು, ಬಸ್ ನಿಲ್ದಾಣದ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಪರಿಣಾಮ, ಮಳೆಗಾಲದಲ್ಲಿ ಮಳೆಯಿಂದ ಹಾಗೂ ಬೇಸಿಗೆಯಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನು ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಸ್ಥಳೀಯ ಅಂಗಡಿ-ಮುಂಗಟ್ಟುಗಳು ಹಾಗೂ ದೇವಸ್ಥಾನಗಳ ಆಸರೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವು ವರ್ಷಗಳಿಂದ ಹಾಳಾಗಿರುವ ಈ ಬಸ್ ನಿಲ್ದಾಣವನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿ ಹೊಸ ಬಸ್ ನಿಲ್ದಾಣ ನಿರ್ಮಿಸುತ್ತಾರಾ? ಅಥವಾ ಇದೇ ಬಸ್ ನಿಲ್ದಾಣವನ್ನು ದುರಸ್ತಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುತ್ತಾರಾ? ಎಂಬುದನ್ನು ಕಾದುನೋಡಬೇಕಾಗಿದೆ.

ಮರಿಕಟ್ಟಿ ಗ್ರಾಮದಲ್ಲಿರುವ ಈ ಬಸ್ ನಿಲ್ದಾಣ ಹಲವು ವರ್ಷಗಳಿಂದ ಹಾಳಾಗಿದೆ. ಪ್ರತಿದಿನ ಬೇರೆ ಊರುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣದ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.
ಬಸ್ ನಿಲ್ದಾಣ ಸ್ವಚ್ಛತೆ ಇಲ್ಲದೆ ಹಾಳಾಗಿರುವುದರಿಂದ ಪ್ರಯಾಣಿಕರು ಸ್ಥಳೀಯ ಅಂಗಡಿ-ಮುಂಗಟ್ಟುಗಳು ಹಾಗೂ ದೇವಸ್ಥಾನಗಳ ಆಸರೆ ಪಡೆಯುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಿ, ಪ್ರಯಾಣಿಕರಿಗೆ ಸೂಕ್ತ ಬಸ್ ನಿಲ್ದಾಣದ ವ್ಯವಸ್ಥೆ ಕಲ್ಪಿಸಬೇಕು ಎಂದು ನಮ್ಮ ವಾಹಿನಿ ಮೂಲಕ ಮನವಿ ಮಾಡುತ್ತೇವೆ.
ವರದಿಗಾರ:
ಶಾನೂಲ ಮತ್ತೆಖಾನ
ಕಿತ್ತೂರು
