ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗಳನ್ನ ಪಂಚಾಯಿತಿ ಕಾರ್ಯಾಲಯದಲ್ಲೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ನಡೆದಿದೆ.


ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಧಾರವಾಡದ ಸತ್ತೂರು ನಿವಾಸಿ, ಮಾಜಿ ಸೈನಿಕ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಅವರನ್ನು ಅವರದೇ ಕುಟುಂಬದ ಸದಸ್ಯರು ಭೀಕರವಾಗಿ ಹತ್ಯೆಗೈದಿದ್ದಾರೆ. ರುದ್ರಪ್ಪ ಅವರು ತಮ್ಮ ಪಾಲಿನ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿ ತೀರ್ಪು ತಂದಿದ್ದರು. ಇದೇ ವಿಚಾರವಾಗಿ ದಾಖಲೆಗಳನ್ನು ಸರಿಪಡಿಸಲು ಗ್ರಾಮ ಪಂಚಾಯಿತಿಗೆ ಬಂದಿದ್ದ ವೇಳೆ, ಪೂರ್ವನಿಯೋಜಿತವಾಗಿ ಅಟ್ಯಾಕ್ ಮಾಡಿದ ರುದ್ರಪ್ಪ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಬಸಪ್ಪನ ಪುತ್ರ ಮಡಿವಾಳಪ್ಪ ಕುಂದರಗಿ ಒಳಗೆ ನುಗ್ಗಿ ಕೊಡಲಿ ಹಾಗೂ ಕುಡಗೋಲಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಈ ಅನಿರೀಕ್ಷಿತ ದಾಳಿಯಲ್ಲಿ ತಂದೆ ರುದ್ರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತಂದೆಯನ್ನು ರಕ್ಷಿಸಲು ಮುಂದಾದ ಯುವತಿ ಶಶಿಕಲಾ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿ ಬರ್ಬರ ಹತ್ಯೆ ಮಾಡಲಾಗಿದೆ. ಈ ವೇಳೆ ಇಬ್ಬರನ್ನು ರಕ್ಷಿಸಲು ಬಂದ ಕಾರು ಚಾಲಕ ರಾಹುಲ್ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಆತನಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಶ್ವಾನದಳ (ಸೋಕೋ) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗಾಗಿ ಎಸ್ಪಿ ಕೆ. ರಾಮರಾಜನ್ ವಿಶೇಷ ತಂಡಗಳನ್ನು ರಚಿಸಿದ್ದು, ತಲೆಮರೆಸಿಕೊಂಡಿರುವ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಲ್ಲದೆ, ಕೊಲೆ ಆರೋಪಿಗಳಿಗೆ ಯಾರಾದರೂ ಆಶ್ರಯ ನೀಡಿದರೆ ಅಂಥವರ ವಿರುದ್ಧವೂ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯಿಂದ ಕಡಕ್ ಎಚ್ಚರಿಕೆ ನೀಡಲಾಗಿದೆ.
ಈ ಜೋಡಿ ಕೊಲೆಯಿಂದ ಅವರಾದಿ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ಶೋಕದ ವಾತಾವರಣ ನಿರ್ಮಾಣವಾಗಿದೆ.
