ದೇಶಾದ್ಯಂತ ಸಡಗರದಿಂದ ಆಚರಿಸಲ್ಪಡುವ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂಭ್ರಮ ಬೆಳಗಾವಿ ಜಿಲ್ಲೆಯ ಗ್ರಾಮೀಣ ಶಾಲೆಯೊಂದರಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಬೈಲಹೊಂಗಲ ತಾಲೂಕಿನ ತಿಗಡಿ ಶಾಲೆಯ ಮಕ್ಕಳು ರಾಧಾ-ಕೃಷ್ಣರ ವೇಷ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.


ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ಸಡಗರ ಹಾಗೂ ವಿಶೇಷವಾಗಿ ಆಚರಿಸಲಾಯಿತು. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ಈ ಪವಿತ್ರ ದಿನದಂದು ಶ್ರೀಕೃಷ್ಣನ ಬಾಲರೂಪವನ್ನು ಸ್ಮರಿಸುತ್ತಾ, ಶಾಲೆಯ ಪುಟ್ಟ ಪುಟ್ಟ ಮಕ್ಕಳು ರಾಧೆ ಹಾಗೂ ಕೃಷ್ಣನ ವೇಷಭೂಷಣಗಳನ್ನು ಧರಿಸಿ ಶಾಲೆಗೆ ಆಗಮಿಸಿ ಎಲ್ಲರ ಕಮನ ಸೆಳೆದರು.
ಬಾಲಕೃಷ್ಣನ ರೂಪದಲ್ಲಿ ಕೈಯಲ್ಲಿ ಕೊಳಲು ಹಿಡಿದು ಕಂಗೊಳಿಸಿದ ಮಕ್ಕಳ ಮುದ್ದಾದ ನಡಿಗೆ ಹಾಗೂ ರಾಧೆಯ ವೇಷದಲ್ಲಿದ್ದ ಬಾಲಕಿಯರ ಸಾಂಪ್ರದಾಯಿಕ ಉಡುಗೆಯನ್ನು ಕಂಡು ನೆರೆದಿದ್ದ ಶಿಕ್ಷಕರು, ಪೋಷಕರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಮಕ್ಕಳ ಈ ಸುಂದರ ಪ್ರದರ್ಶನವು ಸಾಕ್ಷಾತ್ ಕೃಷ್ಣ-ರಾಧೆಯೇ ಶಾಲೆಗೆ ಧರೆಗಿಳಿದು ಬಂದ ಅನುಭವವನ್ನು ನೀಡಿದ್ದು, ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು.
