Bailahongala

ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯ 5.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಬಸ್ ನಿಲ್ದಾಣದಲ್ಲೇ ಕಳವು!

Share

ದೇವಸ್ಥಾನಕ್ಕೆ ತೆರಳಲು ಕುಟುಂಬ ಸಮೇತ ಬಸ್ ಹತ್ತುತ್ತಿದ್ದ ವೇಳೆ ಮಹಿಳೆಯೊಬ್ಬರ ಕೊರಳಲ್ಲಿದ್ದ ಬರೋಬ್ಬರಿ 5.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೈಲಹೊಂಗಲ ತಾಲೂಕಿನ ನನಗುಂಡಿಕ್ಕೊಪ್ಪ ಗ್ರಾಮದ ಮಂಗಲಾ ದೇಸಾಯಿ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಅವರು ಕುಟುಂಬ ಸದಸ್ಯರೊಂದಿಗೆ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಸಮೀಪದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಲು ಬೈಲಹೊಂಗಲ ಬಸ್ ನಿಲ್ದಾಣಕ್ಕೆ ಬಂದಿದ್ದರು‌.
ದೇವಸ್ಥಾನಕ್ಕೆ ತೆರಳುವ ಬಸ್ ಹತ್ತುವ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಭಾರಿ ಜನದಟ್ಟಣೆ ಇತ್ತು. ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮಂಗಲಾ ದೇಸಾಯಿ ಗಮನಕ್ಕೆ ಬಾರದಂತೆ ಕೊರಳಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನಾಭರಣವನ್ನು ಎಗರಿಸಿದ್ದಾರೆ. ಚಿನ್ನಾಭರಣ ಕಳವಾಗಿರುವುದು ತಿಳಿಯುತ್ತಿದ್ದಂತೆ ಮಹಿಳೆ ಕಣ್ಣೀರಿಟ್ಟಿದ್ದು, ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಚಿನ್ನಾಭರಣ ಕಳವಾಗಿರುವ ಬಸ್ ಅನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಅದರಲ್ಲಿದ್ದ ಪ್ರಯಾಣಿಕರನ್ನು ಪರಿಶೀಲನೆ ನಡೆಸಲಾಗಿದೆ. ಬಸ್‌ನಲ್ಲಿದ್ದ ಸುಮಾರು 80 ಪ್ರಯಾಣಿಕರ ಬ್ಯಾಗ್‌ಗಳನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಆದರೆ ಕಳ್ಳರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಇನ್ನು ಪೊಲೀಸರು ಬಸ್ ನಿಲ್ದಾಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಜನದಟ್ಟಣೆಯಲ್ಲಿ ಮಹಿಳೆಯ ಚಿನ್ನಾಭರಣ ಕದ್ದಿರುವ ಆರೋಪಿಗಳ ಚಲನವಲನ ಪತ್ತೆಹಚ್ಚಲು ಮುಂದಾಗಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಮಹಿಳೆಯೊಬ್ಬರ ಚಿನ್ನಾಭರಣವೇ ಕಳವಾಗಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!