BELAGAVI

ಕನ್ನಡಿಗರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳ ವಿರುದ್ಧವೇ ಸೆಣಸುವ ಪ್ರಸಂಗ ಬಂದಿರುವುದು ವಿಷಾದನೀಯ; ಅಶೋಕ ಚಂದರಗಿ

Share

ಬೆಳಗಾವಿ: ಗಡಿ ಭಾಗದಲ್ಲಿ ಕನ್ನಡ ಸಂಘಟನೆಗಳು ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳ ವಿರುದ್ಧ ಹೋರಾಡುವುದರ ಜೊತೆಗೆ ಕನ್ನಡಿಗರಿಂದಲೇ ಆಯ್ಕೆಯಾಗಿರುವ ಜನಪ್ರತಿನಿಧಿಗಳ ವಿರುದ್ಧವೂ ಸೆಣಸುವ ಪ್ರಸಂಗ ಬಂದಿದೆ.ನಮ್ಮವರೇ ಕನ್ನಡ ನಾಡು,ನುಡಿಯ ರಕ್ಷಣೆಯಲ್ಲಿ ಕಾಲ್ತೊಡಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ  ಅಶೋಕ ಚಂದರಗಿ ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಭವನದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯು ಕರೆದಿದ್ದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹಿಸಿ 22 ಕನ್ನಡ ಸಂಘಟನೆಗಳು ಆರು ತಿಂಗಳು ಕಾಲ ನಡೆಸಿದ ಹೋರಾಟದ ಕಾಲಕ್ಕೆ ತಾವು ಅನುಭವಿಸಿದ ಕಹಿ ಪ್ರಸಂಗಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಮಹಾರಾಷ್ಟ್ರ ಸರಕಾರ ಕರ್ನಾಟಕದ ಐದು ಜಿಲ್ಲೆಗಳಬೆಳಗಾವಿ ಸಹಿತ 865 ಹಳ್ಳಿ ಪಟ್ಟಣಗಳನ್ನು ಮಹಾರಾಷ್ಟಕ್ಕೆ ಸೇರಿಸಬೇಕೆಂದು ಕೋರಿ 2004 ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾವೆಯನ್ನು ದಾಖಲಿಸಿದೆ.ಬೆಳಗಾವಿ ಪಾಲಿಕೆಯಲ್ಲಿ 2005
ಅಕ್ಟೋಬರ್ 27 ರಂದು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ.ಇದನ್ನು ಮಹಾರಾಷ್ಟ್ರವು ಸುಪ್ರೀಂ ಕೋರ್ಟಿನಲ್ಲಿ ಪೂರಕ ದಾಖಲೆಯನ್ನಾಗಿ ಬಳಸಿದೆ.ಇದನ್ನು ಎದುರಿಸಲು ಕರ್ನಾಟಕದ ಪರವಾಗಿ ಗೊತ್ತುವಳಿಗೆ ಆಗ್ರಹಿಸಿ ಹೋರಾಟ ನಡೆಸಲಾಯಿತು.ರಾಜ್ಯ ಸರಕಾರದ ಆದೇಶದಂತೆ ಸೆಪ್ಟೆಂಬರ್ 30 ರಂದು ಗೊತ್ತುವಳಿ ಅಂಗೀಕರಿಸಲಾಯಿತು ಎಂದು ಅಶೋಕ ಚಂದರಗಿ ವಿವರಿಸಿದರು.

ಮಹಾರಾಷ್ಟ್ರ ಕೇಳಿರುವ 865 ಹಳ್ಳಿ ಪಟ್ಟಣಗಳ ಸ್ಥಳೀಯ ಸಂಸ್ಥೆಗಳಲ್ಲೂ ಸಹ ಇದೇ ರೀತಿಯ ಗೊತ್ತುವಳಿ ಅಂಗೀಕರಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದು ಅಶೋಕ ಚಂದರಗಿ ಹೇಳಿದರು.
ಪಾಲಿಕೆಯಲ್ಲಿ ಕನ್ನಡಿಗರೇ ಮಹಾಪೌರರ ಮತ್ತು ಉಪ ಮಹಾಪೌರ ಹುದ್ದೆಯನ್ನು ಅಲಂಕರಿಸಿದ್ದಾರೆ.ಆದರೆ ಅವರ ಹಠಮಾರಿತನ ಹಾಗೂ ಯಾರದೋ ಒತ್ತಡಕ್ಕೆ ಮಣಿದು ಆರು ತಿಂಗಳು ಕಾಲ ಗೊತ್ತುವಳಿ ಮಾಡಲಿಲ್ಲ.ಅನಿವಾರ್ಯವಾಗಿ ಕನ್ನಡ ಸಂಘಟನೆಗಳ ಕನ್ನಡದವರ ವಿರುದ್ಧವೇ ಹೋರಾಟ ನಡೆಸಬೇಕಾಯಿತು ಎಂದು ಹೇಳಿದರು.

ವೇದಿಕೆಯ ಮೇಲೆ ಜಿಲ್ಲಾಧ್ಯಕ್ಷ ಸುಧೀರ ಕಾಂಬಳೆ,ಜಿಲ್ಲಾ ಸಂಚಾಲಕ ನಿತಿನ್ ಚೌಗುಲೆ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸ್ಮಿತಾ ಪೂಜಾರ ಹಾಗೂ ಉಪಾಧ್ಯಕ್ಷೆ ಶ್ರೀಮತಿ ಗೀತಾ ಜಿನಬಸಪ್ಪನವರ ಉಪಸ್ಥಿತರಿದ್ದರು.

ಸಭೆಯಲ್ಲಿ ನೂರಕ್ಕೂ ಅಧಿಕ ಕಾರ್ಯಕರ್ತರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಅಶೋಕ ಚಂದರಗಿ ಅವರನ್ನು ಸನ್ಮಾನಿಸಲಾಯಿತು.

Tags:

error: Content is protected !!