State

ಎಥೆನಾಲ್ ಮಿಶ್ರಣ ತನಿಖೆಗೆ ಜಂಟಿ ಸಮಿತಿ ರಚನೆ ಸಾಧ್ಯತೆ;

Share

ರಾಜ್ಯದಲ್ಲಿ ಸದ್ಯ ಎಥೆನಾಲ್ ಮಿಶ್ರಣ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ರಾಜಕೀಯ ವಾಕ್ಸಮರ ಜೋರಾಗಿದೆ. ಇದೀಗ ಸಹಕಾರ ಸಚಿವ ಲಕ್ಷ್ಮಣ ಸವದಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಗೌರವ ತೋರಲಾಗಿದೆ ಎಂಬ ಬಿಜೆಪಿ ಟೀಕೆಗೆ ಎಲ್.ಕೆ. ಅಡ್ವಾಣಿ ಅವರ ವಿಚಾರ ಪ್ರಸ್ತಾಪಿಸಿ ತಿರುಗೇಟು ನೀಡಿದ್ದಾರೆ.

ಉತ್ತರ ಕನ್ನಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಹಕಾರ ಸಚಿವ ಲಕ್ಷ್ಮಣ ಸವದಿ, ಪೆಟ್ರೋಲ್ ಬಂಕ್‌ಗಳಲ್ಲಿ ಸಂಗ್ರಹಿಸಲಾದ ಇಂಧನದ ಮಾದರಿಗಳ ಪರೀಕ್ಷಾ ವರದಿ ಸರ್ಕಾರದ ಕೈಸೇರಿದೆ ಎಂದು ತಿಳಿಸಿದರು. ಪೆಟ್ರೋಲ್ ಬಂಕ್ ಮಾಲೀಕರಿಗೆ ಎಥೆನಾಲ್ ಮಿಶ್ರಣ ಮಾಡಲು ಸಾಧ್ಯವಿಲ್ಲ. ಈ ಕುರಿತು ಕೇಂದ್ರಕ್ಕೆ ಮಾದರಿ ಕಳುಹಿಸಿದರೂ ತಳ್ಳಿಹಾಕುತ್ತಿದ್ದು, ಸತ್ಯಾಸತ್ಯತೆ ತಿಳಿಯಲು ಜಂಟಿ ಸಮಿತಿ ರಚಿಸಿ ಪರೀಕ್ಷೆ ನಡೆಸಲಿ ಎಂದು ಆಗ್ರಹಿಸಿದರು. ಬೆಲೆ ಏರಿಕೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಈ ವಿಚಾರ ಮುನ್ನೆಲೆಗೆ ತರಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಬೆಲೆ ನಿಯಂತ್ರಣ, ಎಂಎಸ್‌ಪಿ ಹಾಗೂ ಎಫ್‌ಆರ್‌ಪಿ ಎಲ್ಲವೂ ಕೇಂದ್ರದ ಕೈಯಲ್ಲಿದೆ. ಪೆಟ್ರೋಲಿಯಂ ಕಂಪನಿಗಳ ಮೇಲೆ ಸಚಿವ ರಿಜ್ವಾನ್ ಅರ್ಷದ್ ಅವರಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಸಮರ್ಥಿಸಿಕೊಂಡರು.

ಇದೇ ವೇಳೆ, ದೆಹಲಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಗೌರವ ತೋರಲಾಗಿದೆ ಎಂಬ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಸವದಿ, ಅದು ಖಾಸಗಿ ಕಾರ್ಯಕ್ರಮವಾಗಿದ್ದು, ಸ್ಥಳಾವಕಾಶ ನೋಡಿ ಅವರು ಕುಳಿತಿರಬಹುದು ಎಂದರು. ಈ ಬಗ್ಗೆ ಟೀಕಿಸುವ ನೈತಿಕ ಹಕ್ಕು ಬಿಜೆಪಿಯವರಿಗಿಲ್ಲ; ಮೊದಲು ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬುದನ್ನು ಬಿಜೆಪಿ ಅವಲೋಕಿಸಲಿ ಎಂದು ಕಿಡಿಕಾರಿದರು. ಇನ್ನು ಸಂಪುಟದಲ್ಲಿ ಮಹಿಳಾ ಸಚಿವರ ಆಯ್ಕೆ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ತೀರ್ಮಾನಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

Tags:

error: Content is protected !!