ರಾಜ್ಯ ಸರ್ಕಾರದ ‘ಹಸಿವು ಮುಕ್ತ ಕರ್ನಾಟಕ’ ಪರಿಕಲ್ಪನೆಯ ಪ್ರಮುಖ ಭಾಗವಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಯಡಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಉಪಾಹಾರ ಹಾಗೂ ಮಧ್ಯಾಹ್ನದ ಊಟ ಒದಗಿಸಲಾಗುತ್ತಿದೆ. ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶೇಡಬಾಳ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಸಾರ್ವಜನಿಕರಿಗೆ ಕರೆ ನೀಡಿದರು.

ಗುರುವಾರ ಶೇಡಬಾಳ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ದೀಪಾ ಹೊನಕಾಂಬಳೆ ಹಾಗೂ ಸದಸ್ಯರು ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇಂದಿರಾ ಕ್ಯಾಂಟೀನ್ನ ವ್ಯವಸ್ಥಾಪಕರಾದ ರವಿ ಬಿಲ್, ಮೋನಿಕಾ ಹಾಗೂ ಪವಿತ್ರಾ ಅವರು ಕ್ಯಾಂಟೀನ್ನಲ್ಲಿ ಸಾರ್ವಜನಿಕರಿಗೆ ದೊರೆಯುವ ಉಪಾಹಾರ ಮತ್ತು ಊಟದ ವಿವರಗಳನ್ನು ತಿಳಿಸಿದರು. ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಪ್ರತಿ ಪ್ಲೇಟ್ಗೆ ₹5 ದರ ನಿಗದಿಪಡಿಸಲಾಗಿದ್ದು, ಸೋಮವಾರ ಮಿರ್ಚಿ-ಮಂಡಕ್ಕಿ, ಮಂಗಳವಾರ ಉಪ್ಪಿಟ್ಟು, ಬುಧವಾರ ಅವಲಕ್ಕಿ, ಗುರುವಾರ ಪಲಾವ್, ಶುಕ್ರವಾರ ಚಿತ್ರಾನ್ನ, ಶನಿವಾರ ಬಿಸಿಬೇಳೆ ಬಾತ್ ಹಾಗೂ ಭಾನುವಾರ ಶಿರಾ ಮತ್ತು ಉಪ್ಪಿಟ್ಟು ನೀಡಲಾಗುವುದು. ಮಧ್ಯಾಹ್ನದ ಊಟದಲ್ಲಿ ₹10ಕ್ಕೆ ಎರಡು ಚಪಾತಿ ಹಾಗೂ ಪಲ್ಯ, ಅನ್ನ-ಸಾಂಬಾರ್ ಒದಗಿಸಲಾಗುವುದು. ಇದರೊಂದಿಗೆ ಮಂಗಳವಾರ ರಾಗಿ ಗಂಜಿ, ಗುರುವಾರ, ಶನಿವಾರ ಹಾಗೂ ಭಾನುವಾರ ಶಾವಿಗೆ ಪಾಯಸ ಮತ್ತು ಸೋಮವಾರ ಹಾಗೂ ಬುಧವಾರ ಮೊಸರನ್ನ ನೀಡಲಾಗುವುದು. ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ದೀಪಾ ಹೊನಕಾಂಬಳೆ, ಸದಸ್ಯರಾದ ರೇಣುಕಾ ಹಣಕಾಂಬಳೆ, ರೋಹಿಣಿ ಪ್ರಕಾಶ ಮಾಳಿ, ಮಹಾದೇವ ಯಾದವಾಡೆ, ರಮೇಶ ರತ್ನಪುಗೋಳ, ರಾಜು ಚೌಗುಲೆ, ರಾಮು ನರಸಾಯಿ, ಅನಿಲ್ ಮಾಲಗಾವೆ, ಅನ್ನಪ್ಪ ಮಾಕನವರ್, ಬಾಬು ಐನಾಪುರೆ, ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಅಭಿಯಂತರ ತಿರುಪತಿ ಲಮಾಣಿ, ವೆಂಕಟೇಶ ಚಲವಾದಿ, ಲೋಕೇಶ ನಡುನಿ, ಸುಧೀರ ಮಾಳಪುಗೋಳ, ಸನ್ಮತಿ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ಭರತ ನಾಂದ್ರೆ, ಕುಮಾರ ಪಾಟೀಲ, ಮಹಾದೇವಿ ಮಕ್ಕನ್ನವರ, ಎಂ.ಎ. ಗಣೇ, ಸುಭಾಷ ದಾಲೆ, ಶ್ರೀನಿವಾಸ ಕಾಂಬಳೆ, ಪ್ರಕಾಶ ಮಾಳಿ, ಮುಕುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಗವಾಡದಲ್ಲಿ ಚಾಲನೆ:
ಕಾಗವಾಡ ಪಟ್ಟಣದಲ್ಲಿ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರ ಘನ ಉಪಸ್ಥಿತಿಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಚಾಲನೆ ನೀಡಲಾಯಿತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಸನ್ನಕುಮಾರ ಕಲ್ಯಾಣಶೆಟ್ಟಿ ಅವರು ಸ್ವಾಗತಿಸಿ, ಯೋಜನೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಪ್ರಕಾಶ ಪಾಟೀಲ, ನ್ಯಾಯವಾದಿ ಸ್ವಪ್ನಿಲ್ ಪಾಟೀಲ, ಸವದತ್ತಿ ರೇಣುಕಾದೇವಿ ಯಲ್ಲಮ್ಮ ಕ್ಷೇತ್ರದ ನಿರ್ದೇಶಕ ಜ್ಯೋತಿಕುಮಾರ ಪಾಟೀಲ, ರಮೇಶ ಚೌಗುಲೆ, ಅರುಣ ಜೋಶಿ, ಅಭಿಯಂತರ ಪಠಾಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಐನಾಪುರದಲ್ಲಿ ಚಾಲನೆ:
ಐನಾಪುರ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಕವ್ವ ಸುರೇಶ ಅಡಿಕೇರಿ ಅವರು ಪೂಜೆ ಸಲ್ಲಿಸಿ ಇಂದಿರಾ ಕ್ಯಾಂಟೀನ್ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ವಿಜಯಾ ಹರಳೆ, ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ನ್ಯಾಯವಾದಿ ಸಂಜಯ ಕುಚನೂರೆ, ಜೈಕರ್ ಕಾಂಬಳೆ, ದಾದಾ ಜಂತನವರ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹಾಂತೇಶ ಕೊಲ್ಲಾಪುರ ಅವರು ಸ್ವಾಗತಿಸಿ, ಯೋಜನೆಯ ಕುರಿತು ಮಾಹಿತಿ ನೀಡಿದರು.
ತಾಲೂಕಿನ ಕಾಗವಾಡ, ಶೇಡಬಾಳ ಹಾಗೂ ಐನಾಪುರ ಪಟ್ಟಣಗಳಲ್ಲಿ ನೂತನವಾಗಿ ಇಂದಿರಾ ಕ್ಯಾಂಟೀನ್ಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಕ್ಯಾಂಟೀನ್ಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ಸವಿದು ಸಂತಸ ವ್ಯಕ್ತಪಡಿಸಿದರು.
ಸುಕುಮಾರ ಬನ್ನುರೆ, ಇನ್ ನ್ಯೂಸ್, ಕಾಗವಾಡ
