bellari

ಡಿಬಿಟಿ ಜಾರಿ ವಿರೋಧಿಸಿ ಡಿಸೆಂಬರ್ 3ರಂದು ಪಡಿತರ ವಿತರಕರಿಂದ ‘ದೆಹಲಿ ಚಲೋ’; ಸರ್ಕಾರಕ್ಕೆ ಖಡಕ್ ಎಚ್ಚರಿಕೆ!

Share

ಕೇಂದ್ರ ಸರ್ಕಾರ ಪಡಿತರ ಬದಲಿಗೆ ಡಿಬಿಟಿ ಮೂಲಕ ನೇರವಾಗಿ ಹಣ ಜಮೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ದೇಶಾದ್ಯಂತ ನ್ಯಾಯಬೆಲೆ ಅಂಗಡಿ ಮಾಲೀಕರು ಬೀದಿಗಿಳಿಯಲು ಸಜ್ಜಾಗಿದ್ದಾರೆ. ಡಿಸೆಂಬರ್ 3ರಂದು ಬೃಹತ್ ‘ದೆಹಲಿ ಚಲೋ’ ಪ್ರತಿಭಟನೆ ನಡೆಸಲು ಪಡಿತರ ವಿತರಕರ ಸಂಘ ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಕಿಟ್ ವಿತರಣೆ ನಿರ್ಧಾರಕ್ಕೂ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ, ದೇಶದ 4.5 ಲಕ್ಷ ಹಾಗೂ ರಾಜ್ಯದ 22 ಸಾವಿರ ನ್ಯಾಯಬೆಲೆ ಅಂಗಡಿಗಳ ವಿತರಕರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ 88 ಕೋಟಿ ಜನರಿಗೆ ಡಿಬಿಟಿ ಮೂಲಕ ಹಣ ಕಳುಹಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಡಿಸೆಂಬರ್ 3ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ವಿತರಕರಿಗೆ ಏಕರೂಪದ ಕಮಿಷನ್ ನೀಡಬೇಕು ಮತ್ತು ಹಿಂದಿನಂತೆ ವಿತರಕರ ಮೂಲಕವೇ ಪಡಿತರ ವಿತರಣೆ ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಧಾನಿ ಮೋದಿ ಅವರು ಘೋಷಿಸಿದಂತೆ 3 ಕೆಜಿ ಗೋಧಿ, 7 ಕೆಜಿ ಅಕ್ಕಿ, ಉಪ್ಪು ಹಾಗೂ ಸಕ್ಕರೆ ನೀಡುವ ಯೋಜನೆ ಮೂರು ವರ್ಷ ಕಳೆದರೂ ಜಾರಿಯಾಗಿಲ್ಲ ಎಂದು ಕೃಷ್ಣಪ್ಪ ಕಿಡಿಕಾರಿದರು. ಇತ್ತ ರಾಜ್ಯ ಸರ್ಕಾರವೂ ಪಡಿತರ ಬದಲು ಕಿಟ್ ನೀಡುವ ನಿರ್ಧಾರದಿಂದ ಹಿಂದೆ ಸರಿಯಬೇಕು; ಒಂದು ವೇಳೆ ಕಿಟ್ ನೀಡಿದರೂ ವಿತರಕರಿಗೆ ಅಕ್ಕಿಯ ಕಮಿಷನ್ ಪಾವತಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ತಕ್ಷಣ ವಿತರಕರ ಸಭೆ ಕರೆದರೆ ಅಕ್ರಮ ಪಡಿತರ ಅಕ್ಕಿ ದಂಧೆಗೆ ಪ್ರೋತ್ಸಾಹ ನೀಡುತ್ತಿರುವ ಅಧಿಕಾರಿಗಳ ಪಟ್ಟಿಯನ್ನು ನೀಡುವುದಾಗಿ ಎಚ್ಚರಿಸಿದ್ದು, ಬೇಡಿಕೆ ಈಡೇರದಿದ್ದರೆ ದೆಹಲಿ ಹೋರಾಟದ ಬಳಿಕ ಪ್ರತಿ ರಾಜ್ಯದಲ್ಲೂ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.

Tags:

error: Content is protected !!