ರಾಜ್ಯ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿ ಹಾಗೂ ಎಸ್ಐಆರ್ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿ ಮನವಿ ಸಲ್ಲಿಸಿದ ಮುಖಂಡರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸುದ್ದಿ: ಬೆಳಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿ ಮನವಿ ಸಲ್ಲಿಸಿದ ಮುಖಂಡರು, ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದರು.
ಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಅನಿಲ್ ಬೆನಕೆ ಅವರು, ಬಸ್ ದರ, ಹಾಲಿನ ದರ, ವಿದ್ಯುತ್ ಶುಲ್ಕ, ಆರ್ಟಿಒ ಶುಲ್ಕ, ಆಸ್ತಿ ವರ್ಗಾವಣೆ ಹಾಗೂ ಟ್ರಾನ್ಸ್ಫಾರ್ಮರ್ ಶುಲ್ಕಗಳಲ್ಲಿ ಶೇ. 15 ರಿಂದ 20 ರಷ್ಟು ತೆರಿಗೆ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು. ಜನರಿಂದ ₹60 ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದರೂ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದ್ದು, ಗ್ಯಾರಂಟಿ ಯೋಜನೆಗಳೂ ಸರಿಯಾಗಿ ತಲುಪುತ್ತಿಲ್ಲ ಎಂದು ದೂರಿದರು. ಈ “ದಿವಾಳಿಕೋರ ಸರ್ಕಾರ” ತಕ್ಷಣವೇ ವಿದ್ಯುತ್ ಮತ್ತು ಡೀಸೆಲ್ ದರ ಕಡಿಮೆ ಮಾಡಬೇಕು, ಇಲ್ಲವಾದರೆ ರಾಜ್ಯದ ಜನರು ಸರ್ಕಾರದ ವಿರುದ್ಧ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರು, ಹಾಲು, ಬಸ್ ಪ್ರಯಾಣ ದರ, ಹೊಸ ಕಟ್ಟಡ ನೋಂದಣಿ ಹಾಗೂ ಮದ್ಯ ಮತ್ತು ಅಬಕಾರಿ ಸುಂಕ ಏರಿಕೆಯಿಂದ ಬಡವರು ಮತ್ತು ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗದ ಎಸ್ಐಆರ್ (ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯು ಮತದಾರರ ವಿಳಾಸ ಹಾಗೂ ಪೌರತ್ವ ಪರಿಶೀಲಿಸುವ ರಾಷ್ಟ್ರೀಯ ಪ್ರಕ್ರಿಯೆಯಾಗಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನುಸುಳುಕೋರರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಗ್ರಾಮೀಣ ಮಂಡಲ ಮಾಜಿ ಅಧ್ಯಕ್ಷ ಧನಂಜಯ್ ಜಾಧವ್ ಅವರು, ಸೆಸ್ ಮೂಲಕ ಪೆಟ್ರೋಲ್ ದರ ಶೇ. 3 ರಷ್ಟು ಹೆಚ್ಚಳ, ಹಾಲಿನ ದರವನ್ನು ಪ್ರತಿ ಅರ್ಧ ಲೀಟರ್ಗೆ ₹8 (ಲೀಟರ್ಗೆ ₹16) ಏರಿಕೆ, ಹಾಗೂ ತೊಗರಿ ಬೇಳೆ, ಅಕ್ಕಿ ಮತ್ತು ಗೋಧಿಯಂತಹ ಅಗತ್ಯ ವಸ್ತುಗಳ ದರ ಶೇ. 35 ರಿಂದ 40 ರಷ್ಟು ಹೆಚ್ಚಳವಾಗಿರುವುದನ್ನು ಕಟುವಾಗಿ ಟೀಕಿಸಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ಪುರುಷರಿಂದ ದುಪ್ಪಟ್ಟು ಶುಲ್ಕ ವಸೂಲಿ ಹಾಗೂ ರೈತರಿಗೆ ಟ್ರಾನ್ಸ್ಫಾರ್ಮರ್ ಮತ್ತು ವಿದ್ಯುತ್ ಕಂಬಗಳಿಗೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿರುವುದನ್ನು ಖಂಡಿಸಿದ ಅವರು, ಚುನಾವಣಾ ಸೋಲಿನ ಹತಾಶೆಯಲ್ಲಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಈ ವೇಳೆ ಮಾಜಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ವಿ.ಐ. ಪಾಟೀಲ್, ಮುಖಂಡರಾದ ಎಂ.ಬಿ. ಜೀರಲಿ, ಮುರುಘೇಂದ್ರಗೌಡ ಪಾಟೀಲ್, ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಉಜ್ವಲಾ ಬಡವಣ್ಣಾಚೆ ಇನ್ನುಳಿದವರು ಭಾಗಿಯಾಗಿದ್ಧರು.
