ಕಬ್ಬು ಕಟಾವಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಕಾಲುವೆಗೆ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಟ್ರಾಕ್ಟರ್‌ನಲ್ಲಿದ್ದ 15 ರಿಂದ 20 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಮಲಪನಗುಡಿ ತಾಂಡಾ ಬಳಿಯ ಕಾಲುವೆ ಮೇಲೆ ಈ ಅವಘಡ ಸಂಭವಿಸಿದೆ. ಕಡ್ಡಿರಾಂಪುರ ತಾಂಡಾದಿಂದ ಕಬ್ಬು ಕಟಾವಿಗಾಗಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವೇಳೆ, ರಸ್ತೆಯ ಹಂಪ್ಸ್ ದಾಟುವಾಗ ಟ್ರಾಕ್ಟರ್ ಎಂಜಿನ್ ಮತ್ತು ಟ್ರಾಲಿ ನಡುವಿನ ಕೊಂಡಿ ಕಳಚಿದೆ. ಪರಿಣಾಮ ಎಂಜಿನ್ ಹಾಗೂ ಟ್ರಾಲಿ ಎರಡೂ ಕಾಲುವೆಗೆ ಉರುಳಿ ಬಿದ್ದಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
