Chikkodi

ಮೂರು ದಶಕಗಳ ಕಾಲ ಭಕ್ತರ ಪ್ರೀತಿಗೆ ಪಾತ್ರವಾಗಿದ್ದ ಅಲಖನೂರ ಕರೆಸಿದ್ದೇಶ್ವರ ದೇಗುಲದ ಗಜರಾಜನ ಅಗಲಿಕೆಗೆ,ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ

Share

ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಪ್ರಸಿದ್ಧ ಶ್ರೀ ಕರೆಸಿದ್ದೇಶ್ವರ ದೇವಸ್ಥಾನದ ಪಟ್ಟದ ಆನೆ ‘ಧ್ರುವ’ ಇತ್ತೀಚೆಗೆ ಅನಾರೋಗ್ಯದಿಂದ ನಿಧನ ಹೊಂದಿದ್ದು, ಅಗಲಿದ ಗಜರಾಜನ ಆತ್ಮಕ್ಕೆ ಶಾಂತಿ ಕೋರಿ ಭಾನುವಾರ ದೇವಸ್ಥಾನದ ಆವರಣದಲ್ಲಿ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಧ್ರುವನನ್ನು ಕಟ್ಟುತ್ತಿದ್ದ ಸ್ಥಳದಲ್ಲಿಯೇ ವಿಶೇಷ ಪೂಜೆ ಹಾಗೂ ಹೋಮ-ಹವನ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ದಿ. ವಸಂತರಾವ ಪಾಟೀಲ ಅವರ ಸೊಸೆ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರ ಧರ್ಮಪತ್ನಿ ಡಾ. ವರ್ಷಾ ಪಾಟೀಲ ಮತ್ತು ದೇವಸ್ಥಾನ ಕಮಿಟಿ ಅಧ್ಯಕ್ಷ ನಾಗಪ್ಪ ಕಂಠಿಕಾರ ಉಪಸ್ಥಿತರಿದ್ದು, ಧ್ರುವನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ವರ್ಷಾ ಪಾಟೀಲ, “ಕಳೆದ ಮೂರು ದಶಕಗಳಿಂದ ಎಲ್ಲರ ಪ್ರೀತಿ, ಅಭಿಮಾನಕ್ಕೆ ಪಾತ್ರವಾಗಿದ್ದ ಧ್ರುವನನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಧ್ರುವನ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಹೋಮ-ಹವನದಲ್ಲಿ ಪಾಲ್ಗೊಂಡು ಶ್ರೀ ಕರೆಸಿದ್ದೇಶ್ವರ ದೇವರಲ್ಲಿ ಪ್ರಾರ್ಥಿಸಿದ್ದೇನೆ,” ಎಂದು ಭಾವುಕರಾದರು.

ದೇವಸ್ಥಾನದ ಅಧ್ಯಕ್ಷ ನಾಗಪ್ಪ ಕಂಠಿಕಾರ ಮಾತನಾಡಿ, “ಸುಮಾರು 30 ವರ್ಷಗಳ ಹಿಂದೆ ಮಾಜಿ ಸಚಿವ ದಿ. ವಸಂತರಾವ ಪಾಟೀಲ ಅವರು ದೇವಸ್ಥಾನಕ್ಕೆ ಧ್ರುವನನ್ನು ಪಟ್ಟದ ಆನೆಯಾಗಿ ಕಾಣಿಕೆ ನೀಡಿದ್ದರು. ಅಂದಿನಿಂದ ಆನೆಯ ಆಹಾರ, ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಅತ್ಯಂತ ಮಮಕಾರದಿಂದ ನೋಡಿಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾದ ಧ್ರುವನಿಗೆ ಮೈಸೂರು ಸೇರಿದಂತೆ ವಿವಿಧೆಡೆಯ ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದೆ. ಜಿಲ್ಲೆಯಾದ್ಯಂತ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾವಿರಾರು ಭಕ್ತರ ಮನಗೆದ್ದಿದ್ದ ಧ್ರುವನ ಅಗಲಿಕೆ ಭಕ್ತವೃಂದಕ್ಕೆ ತುಂಬಲಾರದ ನಷ್ಟವಾಗಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಂಗವಾಗಿ ದಿ. ವಸಂತರಾವ ಪಾಟೀಲ ಕುಟುಂಬದ ವತಿಯಿಂದ ಅರ್ಚಕರಿಗೆ ‘ಆಯರಿ’ ನೀಡಿ ಗೌರವಿಸಲಾಯಿತು. ಅಲಖನೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು, ಗಜಪ್ರೇಮಿಗಳು ಪಾಲ್ಗೊಂಡು ಅಗಲಿದ ಪಟ್ಟದ ಆನೆಗೆ ಅಂತಿಮ ನಮನ ಸಲ್ಲಿಸಿದರು.

Tags:

error: Content is protected !!